ರಾಜ್ಯದಲ್ಲಿ ಬಿಜೆಪಿಗೆ 28 ಸೀಟ್ ಖಚಿತ

h1-BJP 1
Published on

ಹುಬ್ಬಳ್ಳಿ: ದೇಶದ ಯಾವುದೇ ರಾಜ್ಯ ತೆಗೆದುಕೊಂಡರೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟ್‌ಗಳು ಗೆಲ್ಲುವ ಮಾಹಿತಿ ಲಭಿಸಿದೆ. ರಾಜ್ಯದಲ್ಲೂ ನಾವು 28 ಸೀಟ್ ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಹುಲ್ ಗಾಂಧಿ ಗ್ರಾಮೋಪೋನು ಇದ್ದಂತೆ. ಹೇಳಿದ್ದನ್ನೇ ಪುನರಾವರ್ತಿಸುತ್ತಾರೆ. ಕಾಂಗ್ರೆಸ್ ಸೋಲು ಒಪ್ಪಿಕೊಳ್ಳುವುದಿಲ್ಲ. ಮಾತೆತ್ತಿದ್ದರೆ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ತಾಳ-ಮೇಳ ಇಲ್ಲ. ಈಗ ಅವರು ತೆರಿಗೆ ಭಯೋತ್ಪಾದನೆ ಎನ್ನುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡುವುದು ಗೊತ್ತಿಲ್ಲ ಎಂದು ತಿವಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶ ಕಟ್ಟುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ. ಮನೆ-ಮನ ಮುಟ್ಟುವ ಕೆಲಸವನ್ನು ಕಾರ್ಯಕರ್ತರು ಒಟ್ಟಾಗಿ ಮಾಡೋಣ ಎಂದರು.
ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಲೋಕಸಭಾ ಚುನಾವಣೆ ಯುದ್ದದಂತೆ. ನಾವೆಲ್ಲರೂ ಸೇರಿ ಹೋರಾಡೋಣ. ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಶ್ರಮಿಸೋಣ ಎಂದರು.
ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಮೇಯರ್ ವೀಣಾ ಬರದ್ವಾಡ, ಪ್ರಮುಖರಾದ ಮಾ. ನಾಗರಾಜ, ಲಿಂಗರಾಜ ಪಾಟೀಲ, ವೀರಣ್ಣ ಸವಡಿ, ಉಮಾ ಮುಕುಂದ, ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ರಂಗಾ ಬದ್ದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net