ನಾಗಮಂಗಲದಲ್ಲಿ ಬಿಜೆಪಿಯವರು ಕಡ್ಡಿ ಗೀರಿ ಬರುತ್ತಿದ್ದಾರೆ; ಶಿವರಾಮೇಗೌಡ ವಾಗ್ದಾಳಿ

LR Shivaramegowda
Published on

ಬೆಂಗಳೂರು: ನಾಗಮಂಗಲದಲ್ಲಿ ಬಿಜೆಪಿಯವರು ಬೆಂಕಿ ನಂದಿಸುವ ಬದಲು ಕಡ್ಡಿ ಗೀರಿ ಬರುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹರಿಹಾಯ್ದರು.

ನಾನು ಎಂಪಿ, ಶಾಸಕನಾಗಿದ್ದವನು. ನಾಗಮಂಗಲ ಬಹಳ ಸೌಹಾರ್ದವಾಗಿತ್ತು. ಗಣೇಶನ ಉತ್ಸವದಲ್ಲಿ ಗಲಾಟೆಯಾಗಿದೆ. ಯಾರದ್ದು ತಪ್ಪು ಯಾರು ಸರಿ ಎಂದು ಹೇಳುವುದಿಲ್ಲ. ಬಿಜೆಪಿ ನಾಯಕರು ನಾಗಮಂಗಲ ಏನು ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಕುಮಾರಸ್ವಾಮಿ ಏನು ಬೇಕಾದರೂ ಮಾಡಬಹುದು. ಬೆಂಕಿ ಹಚ್ಚಬಹುದು, ಆರಿಸಬಹುದು ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ, ವಿಜಯೇಂದ್ರ,ಅಶ್ವತ್ಥ ನಾರಾಯಣ್, ಅಶೋಕ್ ಹೀಗೆ ಒಂದೊಂದೇ ತಂಡ ಹೋಗಿ ಕಡ್ಡಿ ಗೀರಿ ಬರುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ನಾಯಕರಿಗೆ ಅಲ್ಲಿ ಕುಮಾರಸ್ವಾಮಿ ಉಸಿರಾಡಲೂ ಬಿಡುವುದಿಲ್ಲ. ಕುಮಾರಸ್ವಾಮಿ ರಾಷ್ಟ್ರ ನಾಯಕರು. ನಮ್ಮವರಿಗೆ ಕೆಲಸ ಕೊಡಿಸಿ. ವಾರಕ್ಕೆ ಮೂರು ದಿನ ಇಲ್ಲೇ ಇರುವುದನ್ನು ಬಿಡಿ, ನೀವು ಪ್ರಧಾನಿಗೆ ಫೈಟ್ ಕೊಡಿ ಎಂದು ಟಾಂಗ್ ಕೊಟ್ಟರು.

ಶಾಸಕ ಮುನಿರತ್ನ ಆ ರೀತಿ ಮಾತನಾಡುತ್ತಾರೆ ಎಂದು ಗೊತ್ತಿರಲಿಲ್ಲ. ಅವರ ಆಡಿಯೋ ಕೇಳಿದರೆ ಮೈಜುಂ ಎನ್ನುತ್ತದೆ. ನಾನು ಇದನ್ನು ಖಂಡಿಸುತ್ತೇನೆ. ದರ್ಶನ್ ವಿಚಾರದಲ್ಲೂ ಹಾಗಾಗಬಾರದಿತ್ತು. ಇಂತಹ ದರ್ಶನ್ ನಮಗೆ ಬೇಕಿರಲಿಲ್ಲ. ಇಂತಹ ಕೆಲಸ ಅವರು ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಯಾರು ತಪ್ಪು ಮಾಡಿದ್ದಾರೆ ಕ್ರಮ ಆಗಲಿ ಎಂದು ಶಿವರಾಮೇಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net