ಎಎಪಿ ಬೆಳವಣಿಗೆ ಕಂಡು ಬಿಜೆಪಿ ಹೆದರಿದೆ

VJP-28-2
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭೋಗೇಶ ಸೋಲಾಪುರ, ರೋಹನ್ ಐನಾಪುರ, ಧನರಾಜ ಬಸವಂತಿ ಮತ್ತಿತರರಿದ್ದಾರೆ.
Published on

ವಿಜಯಪುರ: ದೆಹಲಿಯ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಷ್ ಸಿಸೋದಿಯಾ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾತನಾಡಿ, ದೇಶಾದ್ಯಂತ ಎಎಪಿ ಬೆಳೆಯುತ್ತಿರುವುದನ್ನು ಕಂಡು ಹೆದರಿರುವ ಬಿಜೆಪಿಯು ಸಿಸೋದಿಯಾ ಅವರನ್ನು ಬಂಧಿಸಿದೆ ಎಂದು ಹೇಳಿದರು.

ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ನೂತನ ಅಬಕಾರಿ ನೀತಿಯನ್ನು ದೆಹಲಿಯಲ್ಲಿ ಇನ್ನೂ ಜಾರಿಗೆ ತಂದಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಇದೇ ನೀತಿ ಜಾರಿಯಲ್ಲಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿಸೋದಿಯಾ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದರೂ, ಆರೋಪ ಸಾಬೀತುಪಡಿಸುವಂತಹ ಯಾವುದೇ ಸಣ್ಣ ಸಾಕ್ಷೃ ಸಿಕಿಲ್ಲ. ನಗದು ಅಥವಾ ಯಾವುದೇ ಅಕ್ರಮ ದಾಖಲೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆಮ್ ಆದ್ಮಿ ಪಾರ್ಟಿಯೊಂದೇ ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿ ಎಂಬುದನ್ನು ಅರಿತಿರುವ ಬಿಜೆಪಿಯು ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ತೊಂದರೆ ನೀಡುತ್ತಿದೆ ಎಂದು ಹರಿಹಾಯ್ದರು.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಮ್ ಆದ್ಮಿ ಪಾರ್ಟಿ ಪ್ರವರ್ಧಮಾನಕ್ಕೆ ಬರುತ್ತಿದೆ. ಜನರು ಎಎಪಿ ಪರವಾಗಿ ಇರುವುದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಚುನಾವಣೆಯ ಪ್ರಚಾರಕ್ಕೆ ಮನೀಷ್ ಸಿಸೋದಿಯಾ ಆಗಮಿಸಿ, ಇಲ್ಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿಯನ್ನು ಪ್ರಶ್ನಿಸಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರವು ಸಿಬಿಐ ಮೂಲಕ ಅವರನ್ನು ಬಂಧಿಸಿದೆ. ದೇಶ ಹಾಗೂ ಜನರಿಗೋಸ್ಕರ ಕೇವಲ ಬಂಧನ ಮಾತ್ರವಲ್ಲ, ಪ್ರಾಣ ನೀಡಲೂ ನಾವುಗಳು ಸಿದ್ಧವಿದ್ದೇವೆ ಎಂದು ಭೋಗೇಶ ಹೇಳಿದರು.

ಆಮ್ ಆದ್ಮಿ ಪಾರ್ಟಿಯ ದೆಹಲಿ ಸರ್ಕಾರದ ಶಿಕ್ಷಣ ಕ್ರಾಂತಿಯನ್ನು ಕಂಡು ಅನೇಕ ವಿದೇಶಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿವೆ. ಆದರೆ ಬಿಜೆಪಿಗೆ ಮಾತ್ರ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಸಚಿವರಾಗಿ ಮನೀಷ್ ಸಿಸೋದಿಯಾರವರು ಬರೋಬ್ಬರಿ 25,000 ಕ್ಕೂ ಶಾಲಾ ಕೊಠಡಿಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಸುಮಾರು 20 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಇಂತಹವರ ವಿರುದ್ಧ ಬಿಜೆಪಿಯು ಈ ರೀತಿ ಕೀಳುಮಟ್ಟದ ಕುತಂತ್ರ ಮಾಡುತ್ತಿರುವುದು ಖಂಡನೀಯ. ಗಿಡವು ಚಿವುಟಿದಷ್ಟೂ ಚಿಗುರುವಂತೆ ಆಮ್ ಆದ್ಮಿ ಪಾರ್ಟಿ ಕೂಡ ಬಿಜೆಪಿ ತೊಂದರೆ ನೀಡಿದಷ್ಟೂ ಹೆಚ್ಚಿನ ವೇಗದಲ್ಲಿ ಬೆಳೆಯಲಿದೆ ಎಂದು ಹೇಳಿದರು.

ರಾಜ್ಯ ಉಪಾಧ್ಯಕ್ಷ ರೋಹನ್ ಐನಾಪುರ, ಜಿಲ್ಲಾ ಕಾರ್ಯದರ್ಶಿ ಧನರಾಜ ಬಸವಂತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಕೊಳ್ಳಾರಿ, ಸೇವಾಕಾಂಕ್ಷಿ ಮಲ್ಲಿಕಾರ್ಜುನ ಕೆಂಗನಾಳ, ಎಂ.ಎಸ್. ರದ್ದೇವಾಡಗಿ, ಜಕ್ಕಪ್ಪ ಕುಂಬಾರ, ಗುರು ಚವಾಣ್, ಅವಿನಾಶ ಮಾದರ, ಮುಖಂಡರಾದ ನಿಹಾದ್ ಅಹಮದ್ ಗೋಡಿಹಾಳ, ಅಬ್ದುಲ್ ಹಮೀದ್ ಶೇಖ್, ಡಾ. ಸಾಬೀರ ಮೊಮಿನ್, ಸಂಜಿವ ಶೆಟಗಾರ, ಗೋವಿಂದ ನಾಯಕ್, ಸೋನಾಬಾಯಿ ಚವಾಣ್, ಮೋದಿನಸಾಬ್, ಯುವ ಮುಖಂಡ ಅಮೀರ್ ಸೊಹೈಲ್ ಪಟೇಲ್, ಜ್ಯೋತಿಬಾ ಹೊನ್ನಕಲಸೆ, ಬಸವರಾಜ ಖಾನಾಪುರ, ಶರಣು ಹಂಚಲಿ, ಇಂದ್ರಜಿತ್ ಜಾಧವ, ರವಿ ರಾಠೋಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net