

ಹುಬ್ಬಳ್ಳಿ: ಸಾರಿಗೆ ಬಸ್ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯಾಣ ದರ ಏರಿಕೆ ಅನಿವಾರ್ಯವಿತ್ತು. ಕಾರಣವೂ ಇದೆ.
ದಿನಕ್ಕೆ 1.16 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. ಅದರಲ್ಲಿ 65 ಲಕ್ಷ ಜನ ಹೆಣ್ಣು ಮಕ್ಕಳಿದ್ದಾರೆ. ಅದರ ಜತೆಗೆ 5,300 ಹೊಸ ಬಸ್ ಖರೀದಿ ಮಾಡಿದ್ದೇವೆ. 8000 ಹೊಸ ಸಿಬ್ಬಂದಿ ತೆಗೆದುಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ಕೊಟ್ಟಿದೆ. ಈಗಾಗಲೇ ನಾಲ್ಕರಿಂದ ಐದು ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೀಗಾಗಿ ದರ ಏರಿಕೆ ಮಾಡಲಾಗಿದೆ ಎಂದರು.
ಬಿಜೆಪಿಯವರು ದರ ಏರಿಕೆ ಕುರಿತು ಮಾತನಾಡುತ್ತಿದ್ದಾರೆ. ಚರ್ಚೆಗೆ ಬಂದರೆ ಮಾತನಾಡೋಣ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಡೀಸೆಲ್ ಅನ್ನು 30ರಿಂದ 40 ರೂ.ಗೆ ಕೊಡಬಹುದು. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾ 103 ಡಾಲರ್‌ಗೆ 1 ಬ್ಯಾರಲ್ ಇಂಧನ ಖರೀದಿ ಮಾಡುತ್ತಿದ್ದರು. 90 ಸಾವಿರ ಕೋಟಿ ರೂ. ಸಬ್ಸಿಡಿ ಕೊಡುತ್ತಿದ್ದರು. ಇಂಧನ ಬೆಲೆ ಜಾಸ್ತಿಯಾದಾಗ ಎಲ್ಲ ವಸ್ತುಗಳ ಬೆಲೆ ಗಗನಕ್ಕೆರುತ್ತವೆ. ಸಾಗಾಟ ವೆಚ್ಚ ಜಾಸ್ತಿಯಾದಾಗ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಬೀರುತ್ತದೆ ಎಂದರು.
2004ರಿಂದ 2014ರವರೆಗೆ 60 ರಿಂದ 56 ರೂ.ಗೆ ಇಂಧನ ಬೆಲೆ ಇತ್ತು. ಸದ್ಯ ಜಾಗತಿಕವಾಗಿ ಇಂಧನ ಬೆಲೆ ಇಳಿದಿದೆ. ನಮ್ಮ ದೇಶದಲ್ಲಿ ಸದ್ಯ 25-30 ರೂ.ಗೆ ಡೀಸೆಲ್, ಪೆಟ್ರೋಲ್ ಕೊಡಬಹುದು. ರಿಲಯನ್ಸ್ ಪೆಟ್ರೋಲ್ ಬಂಕ್ ಉಳಿಸಬೇಕು ಎನ್ನುವ ಉದ್ದೇಶದಿಂದ ಕೊಡುತ್ತಿಲ್ಲ. ಕೇಂದ್ರದಲ್ಲಿ ಸಬ್ಸಿಡಿ ಜಾಸ್ತಿ ಮಾಡಿದರೆ, ರಿಲಯನ್ಸ್ ಪೆಟ್ರೋಲ್ ಬಂಕ್ ನಮ್ಮೊಂದಿಗೆ ಸ್ಪರ್ಧೆ ಮಾಡಲಾಗುವುದಿಲ್ಲ. ಮನಮೋಹನ ಸಿಂಗ್ ಕೊಟ್ಟಂತಹ ಸಬ್ಸಿಡಿ ಕೊಟ್ಟರೆ ಭಾರತದಲ್ಲಿರುವಂತಹ ರಿಲಯನ್ಸ್ ಬಂಕ್‌ಗಳೆಲ್ಲ ಮುಚ್ಚಿ ಹೋಗುತ್ತವೆ. ಕೇಂದ್ರ ಸಬ್ಸಿಡಿ ಕೊಟ್ಟರೆ ವಸ್ತುಗಳ ಬೆಲೆ ಕಡಿಮೆ ಆಗುತ್ತದೆ ಎಂದರು.
ಎಲ್ಲದಕ್ಕೂ ಪ್ರತಿಭಟನೆ ಮಾಡುವ ಬಿಜೆಪಿಯವರು ಜಿಎಸ್‌ಟಿಗಾಗಿ ಯಾಕೆ ಪ್ರತಿಭಟನೆ ಮಾಡುತ್ತಿಲ್ಲ. ಕೇದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಮೈ ಪ್ಯಾಜ್ ನಹಿ ಕಾತಿ ಹ್ಞೂಂ’ ಅಂತ ಹೇಳಿದ್ದರು. ಕೇಂದ್ರ ಹಣಕಾಸು ಸಚಿವರು ಹೀಗೆ ಹೇಳಬಹುದೇ? ಬಿಜೆಪಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದರು.
ನಾವು ಉಚಿತವಾಗಿ ಏನನ್ನಾದ್ರೂ ಕೊಡುತ್ತಿದ್ದೇವೆ. ಬಿಜೆಪಿಯವರು ಏನು ಕೊಟ್ಟಿದ್ದಾರೆ? ಮೋದಿ ಕಿ ಗ್ಯಾರಂಟಿ ಅಂತ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದಾರಲ್ಲ ? ಇದನ್ನು ಯಾರು ಕೊಟ್ಟಿದ್ದು? ಈ ದೇಶದಲ್ಲಿ 1.10 ಲಕ್ಷ ಕೋಟಿ ರೂ. ಕೇಂದ್ರದ ಬಜೆಟ್‌ನಲ್ಲಿಟ್ಟು ಆಹಾರ ಭದ್ರತೆ ಕಾಯ್ದೆ ತಂದವರು ಯಾರು?. ಬಿಜೆಪಿಯವರು 2 ರೂ. ಸಬ್ಸಿಡಿ ಕೊಟ್ಟು, 20 ಸಾವಿರ ಕೋಟಿ ರೂ. ಪ್ರಚಾರ ತೆಗೆದುಕೊಂಡರು. ಕೇಂದ್ರ ಸರ್ಕಾರ ತೈಲ ದರ ಇಳಿಸಿದರೆ, ಬಸ್ ದರ ತಾನಾಗಿಯೇ ಇಳಿಯುತ್ತದೆ ಎಂದು ಲಾಡ್ ಹೇಳಿದರು.