ಗುತ್ತಿಗೆದಾರರ ಬಿಲ್ ಸಮಸ್ಯೆಗೆ ಬಿಜೆಪಿ ಕಾರಣ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

vijayavani logo
Published on

ಬೆಂಗಳೂರು: ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಕಾಲ ಕಾಲಕ್ಕೆ ಬಿಲ್ ಪಾವತಿಸುತ್ತಿದ್ದು, ಹೆಚ್ಚುವರಿ ಬಿಲ್ ಮಾತ್ರ ನಿಧಾನವಾಗುತ್ತಿದೆ. ಈ ಹಿಂದೆ ಬಿಜೆಪಿ ಅಧಿಕಾರವಧಿಯಲ್ಲಿ ಹೆಚ್ಚು ಬಾಕಿ ಇದ್ದ ಕಾರಣ ಆ ಸಮಸ್ಯೆಯನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಪೂರ್ವ ಪಾಲಿಕೆ ವ್ಯಾಪ್ತಿಯ ಕೆ.ಆರ್.ಪುರದ ವೆಂಗಯ್ಯನ ಕೆರೆ ಬಳಿ ಶನಿವಾರ ಆಯೋಜಿಸಿದ್ದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರವಧಿಯಲ್ಲಿ ರಾಜ್ಯದ ಬಜೆಟ್‌ಗಿಂತ ಹೆಚ್ಚಿನ ವೆಚ್ಚಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಬಿಲ್ ಸಮಸ್ಯೆ ಬೃಹದಾಕಾರವಾಗಿ ಬೆಳೆಯಲು ಅವರೇ ಕಾರಣ. ಆದರೂ, ನಮ್ಮ ಸರ್ಕಾರ ಹಂತ ಹಂತವಾಗಿ ಬಾಕಿ ಬಿಲ್ ಪಾವತಿಸುತ್ತಿದ್ದೇವೆ. ಮುಂದೆಯೂ ಇದನ್ನು ಪಾವತಿ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಹಣ ಬಿಡುಗಡೆಗೆ ಲಂಚ ಕೇಳಲಾಗುತ್ತಿದೆ ಎಂದು ವೃಥಾ ಆರೋಪ ಮಾಡಬಾರದು. ಅಂತಹ ಪ್ರಕರಣ ನಡೆದಿದ್ದಲ್ಲಿ ದೂರು ನೀಡಿ ದಾಖಲೆಗಳನ್ನು ಒದಗಿಸಲಿ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಚರ್ಚೆ ಮಾಡಿದರೆ ಪರಿಹಾರ ಸಿಗದು. ಜತೆಗೆ ಗುತ್ತಿಗೆದಾರರು ಸರ್ಕಾರಕ್ಕೆ ಗಡುವು ನೀಡುವುದು ಸರಿಲ್ಲ. ಸಂಘದ ಬೆದರಿಕೆಗೂ ಹೆದರುವುದಿಲ್ಲ. ಆದರೂ, ಬಾಕಿ ಬಿಲ್ ಬಗ್ಗೆ ಸಂಘದ ಪದಾಧಿಕಾರಿಗಳ ಸಯನ್ನು ಶೀಘ್ರ ಕರೆದು ಚರ್ಚಿಸುತ್ತೇವೆ ಎಂದು ಸಮಜಾಯಿಷಿ ನೀಡಿದರು.

ಮುಜುಂದಾರ್‌ಗೆ ಸಹಕಾರ ನೀಡಲು ಸಿದ್ಧ:

ನಗರದಲ್ಲಿ ಗುಂಡಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಉದ್ಯಮಿ ಕಿರಣ್ ಮುಜುಂದಾರ್ ಅವರು ಇದೀಗ ಸ್ವಂತ ಹಣ ಬಳಸಿ 10-15 ಸಂಖ್ಯೆಯ ರಸ್ತೆಗಳನ್ನು ಅಭಿವೃದ್ಧಿ ಮಾಡುವುದಾಗಿ ಘೋಷಿಸಿದ್ದಾರೆ. ಇದನ್ನು ನಾವು ಸ್ವಾಗತಿಸಲಿದ್ದು, ರಸ್ತೆ ದುರಸ್ತಿಗೆ ಅಗತ್ಯ ಸಹಕಾರ ನೀಡುತ್ತೇವೆ. ಯಾವ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು ಎಂಬ ವಿಚಾರವನ್ನು ಅವರ ವಿವೇಚನೆಗೆ ಬಿಡುತ್ತೇವೆ. ಈ ವಿಚಾರವಾಗಿ ಸರ್ಕಾರ ಉದ್ಯಮಿಗಳೊಂದಿಗೆ ಚರ್ಚಿಸಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net