ಅಧಿಕಾರಕ್ಕಾಗಿ ಬಿಜೆಪಿ ಏನಕ್ಕೂ ಸಿದ್ಧ: ಟಿ.ಡಿ.ರಾಜೇಗೌಡ

TD Rajegowda
Published on

ಚಿಕ್ಕಮಗಳೂರು: ಬಿಜೆಪಿ ಅಧಿಕಾರಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಧ ಎನ್ನುವುದನ್ನು ಜಿಪಂ ಸಭೆಗೆ ಸ್ವಪಕ್ಷದ ಸದಸ್ಯರೇ ಗೈರುಹಾಜರಾಗಿರುವ ಬೆಳವಣಿಗೆ ನಿರೂಪಿಸಿದ್ದು, ಇದನ್ನು ಖಂಡಿಸುವುದಾಗಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಸಭೆ ಮುಂದೂಡಿದ ವೇಳೆಗೆ ಆಗಮಿಸಿದ ಅವರು, ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಇನ್ನೂ ಕೇವಲ 5 ತಿಂಗಳ ಅಧಿಕಾರವಧಿ ಇರುವಾಗ ಸಭೆಗೆ ಗೈರಾಗಿ ದಲಿತ ಮಹಿಳೆಯೊಬ್ಬರ ಮೇಲೆ ಒತ್ತಡ ತರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೆ, ಇಂಥ ಘಟನೆ ಕರ್ನಾಟಕದಲ್ಲಿ ಮಾತ್ರವಲ್ಲ ಬಹುಶಃ ದೇಶದ ಯಾವ ರಾಜ್ಯದಲ್ಲೂ ನಡೆದಿರುವ ನಿದರ್ಶನವಿಲ್ಲ. ಯಾರಿಗೂ ಈ ರೀತಿ ಆಗಬಾರದು. ಸ್ವಪಕ್ಷದವರೇ ಸಭೆಗೆ ಬಾರದಿರುವುದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ಟೀಕಿಸಿದರು.

ಆಂತರಿಕ ವಿಚಾರವೇನಿದ್ದರೂ ಬಿಜೆಪಿಯವರು ಪಕ್ಷದ ವೇದಿಕೆಯಲ್ಲಿ ತೀರ್ಮಾನಿಸಿಕೊಳ್ಳಬೇಕು. ಈಗಿನ ಕಠಿಣ ಪರಿಸ್ಥಿತಿಯಲ್ಲಿ ಒಂದೆಡೆ ಕರೊನಾ, ಇನ್ನೊಂದೆಡೆ ಅತಿವೃಷ್ಟಿ, ಅನಾವೃಷ್ಟಿ, ರಸ್ತೆ ಸಮಸ್ಯೆ, ಅರಣ್ಯ ಇಲಾಖೆಯಿಂದಾಗುತ್ತಿರುವ ಸಮಸ್ಯೆ, 4(1) ನೋಟಿಫಿಕೇಶನ್, ಬಗರ್ ಜೋನ್, ನಿವೇಶನ ಹಕ್ಕುಪತ್ರ ವಿತರಣೆ, ಫಲಾನುಭವಿಗಳ ಆಯ್ಕೆ ಮತ್ತಿತರ ಅನೇಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕೆಲವಕ್ಕೆ ಒಪ್ಪಿಗೆ ಪಡೆಯಬೇಕಿತ್ತು. ಹೀಗಿರುವಲ್ಲಿ ಪದೇ ಪದೇ ಸಭೆ ಮುಂದೂಡಿರುವುದು ಸಮಂಜಸವಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net