

ಹುಬ್ಬಳ್ಳಿ: ದೆಹಲಿಯಲ್ಲಿ ವಿವಿಧ ಬೇಡಿಕೆ ಈಡೇರಿಸಲು ರೈತರು ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೃಷಿ ಸಚಿವ ಮುಂಡಾ ಅವರು ರೈತರ ಸಂಘಟನೆ ಜತೆ ಮಾತನಾಡಿದ್ದಾರೆ. ರೈತರು ಹೊಸ ಬೇಡಿಕೆ ಇಟ್ಟಿದ್ದು, ನಮ್ಮ ಸರ್ಕಾರ ಸಹಾನಭೂತಿಯಿಂದ ರೈತರ ಬೇಡಿಕೆ ಪರಿಶೀಲನೆ ಮಾಡುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಕಲ್ಲು ಹೊಡೆಯುತ್ತಿರುವವರು ರೈತಲ್ಲ. ಅನುಮತಿ ಪಡೆಯದೆ ಬರುವವರನ್ನು ತಡೆಯಲಾಗುತ್ತಿದೆ. ರೈತರು ತಮ್ಮ ಬೇಡಿಕೆಗಳ ಬಗ್ಗೆ ಚರ್ಚೆಗೆ ಬರಬೇಕು. ರೈತರೊಂದಿಗೆ ನಾವು ಸಹಾನುಭೂತಿಯಿಂದ ನಡೆದುಕೊಳ್ಳುತ್ತಿದ್ದೇವೆ ಎಂದರು.
ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ನನ್ನ ಗೆಲುವು ಖಚಿತ. ಜೆಡಿಎಸ್ ಬಿಜೆಪಿ ಸೀಟು ಹಂಚಿಕೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಈಗ ಮಾತನಾಡೋದು ಕೇವಲ ಉಹಾಪೋಹವಷ್ಟೆ. ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ಎಲ್ಲವೂ ಅಂತಿಮವಾಗಲಿದೆ. ಒಂದು ಹಂತದಲ್ಲಿ ಕೇಂದ್ರದಲ್ಲಿ ಚರ್ಚೆ ನಡಿಯುತ್ತಿದೆ. ಅದೆಲ್ಲವೂ ಅಪೂರ್ಣ ಆಗಿದೆ. ಕಾರ್ಯಕಾರಿಣಿ ನಂತರವೇ ಎಲ್ಲವೂ ಅಂತಿಮವಾಗಲಿದೆ ಎಂದರು.
ಸುಳ್ಳು ರಾಮಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ಮೊದಲು ಎನ್‌ಡಿಆರ್ ಎಫ್‌ನಲ್ಲಿ ಇಷ್ಟೊಂದು ಹಣ ಕೊಡುತ್ತಿರಲಿಲ್ಲ. ನಾವು ಮುಂಗಡ ಕೊಟ್ಟಿದ್ದೇವೆ. ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ನಾವು ಒಂದೇ ಒಂದು ರೂಪಾಯಿ ಜಿಎಸ್‌ಟಿ ಪಾಲು ಕೊಡುವುದು ಬಾಕಿ ಉಳಿಸಿಕೊಂಡಿಲ್ಲ. ಎನ್‌ಡಿಆರ್‌ಎಫ್‌ನಲ್ಲಿ 12 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ. ನಾನು ನಿನ್ನೆಯಿಂದ ಸಿದ್ದರಾಮಯ್ಯ ಅವರನ್ನು ಸುಳ್ಳು ರಾಮಯ್ಯ ಎಂದು ಕರೆಯುತ್ತಿದ್ದೇನೆ ಎಂದು ಟೀಕಿಸಿದರು.