ವೈಫಲ್ಯ ಮುಚ್ಚಿಕೊಳ್ಳಲು ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ

New Cm New
Published on

ಹುಬ್ಬಳ್ಳಿ : ನರೇಂದ್ರ ಮೋದಿ ಸರ್ಕಾರ ನಿರಂತರ ಬೆಲೆ ಏರಿಕೆ ಜತೆಗೆ ಜಾತಿ-ಧರ್ಮಗಳ ನಡುವೆ ವೈಷಮ್ಯದ ಬೆಂಕಿ ಹಚ್ಚಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಅಭಿವೃದ್ಧಿಗೂ ಶ್ರಮಿಸುತ್ತಿದ್ದರೂ ಬಿಜೆಪಿಯವರು ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆಯೆಂದು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಹಾಗೂ ಸಂವಿಧಾನ ಬಚಾವೊ ಪ್ರತಿಭಟನಾ ಸಮಾವೇಶವನ್ನು ಅಡುಗೆ ಅನಿಲ ಸಿಲಿಂಡರ್​ಗಳಿಗೆ ಮಾಲೆ ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಎಲ್ಲ ರಾಜ್ಯಗಳಲ್ಲಿಯೂ ನಿತ್ಯೋಪಯೋಗಿ ವಸ್ತುಗಳ ಬೆಲೆಗಳು ಗಗನಕ್ಕೆ ಏರಿವೆ. ಬೆಲೆ ಏರಿಕೆ ಮಾಡಿದ್ದು ಪ್ರಧಾನಿ ಮೋದಿ ಎಂಬುದು ಜನರಿಗೆ ಮನವರಿಕೆಯಾಗಿದೆ. ಒಳ್ಳೆಯ ದಿನಗಳು ಬರುತ್ತವೆ ಎನ್ನುತ್ತಲೇ ಜನಸಾಮಾನ್ಯರು ಜೀವನ ಮಾಡದಂತಹ ದುಸ್ಥಿತಿಯನ್ನು ಮೋದಿ ಸರ್ಕಾರ ತಂದಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೋದಿ ಆಡಳಿತದಲ್ಲಿ ಅಕ್ಕಿಯಿಂದ ಚಿನ್ನದವರೆಗಿನ ಬೆಲೆ ಗಗನಕ್ಕೆ ಏರಿದೆ. ಉಪ್ಪು, ಸಕ್ಕರೆ, ಟೀ, ಕಾಫಿ, ಅಕ್ಕಿ, ಬೇಳೆ, ಎಣ್ಣೆ, ಕಾಳು, ಚಿನ್ನ, ಬೆಳ್ಳಿ, ರಸಗೊಬ್ಬರ, ಔಷಧ, ಡೀಸೆಲ್, ಪೆಟ್ರೋಲ್​, ಅಡುಗೆ ಅನಿಲ ಸೇರಿ ಎಲ್ಲದರ ಬೆಲೆ ಆಕಾಶಕ್ಕೆ ಏರಿಸಿರುವ ಮೋದಿಯವರೇ ನೀವು ಯಾವುದನ್ನು ತಾನೆ ಬಿಟ್ಟಿದ್ದೀರಿ ? ಇದೇನಾ ನಿಮ್ಮ ‘ಅಚ್ಛೇ ದಿನ್ ?’ ಎಂದು ಪ್ರಶ್ನಿಸಿದರು.

ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುವುದರ ಜತೆಗೆ ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿದ್ದೇವೆ. ಮಧ್ಯಮ ಮತ್ತು ಬೃಹತ್ ನೀರಾವರಿಗೆ 22 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ. ಸಣ್ಣ ನೀರಾವರಿಗೆ 3 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ. ಆರೋಗ್ಯ, ಲೋಕೋಪಯೋಗಿ, ಶಿಕ್ಷಣ ಸೇರಿದಂತೆ ಎಲ್ಲ ಇಲಾಖೆಗಳಿಗೂ ಸಾಕಷ್ಟು ಹಣ ಕೊಟ್ಟಿದ್ದೇವೆ ಎಂದು ಹೇಳಿದರು.

ಹಾಲಿನ ದರ ಲೀಟರ್​ಗೆ 4 ರೂ. ಹೆಚ್ಚಿಸಿ, ಎಲ್ಲ ಹಣನ್ನು ರೈತರಿಗೆ ವರ್ಗಾಯಿಸಿದ್ದೇವೆ. ಇದರಲ್ಲಿ ಹತ್ತು ಪೈಸೆ ಕೂಡ ಸರ್ಕಾರಕ್ಕೆ ಬರುವುದಿಲ್ಲ. ಆದರೆ, ನೀವು ಹೆಚ್ಚಿಸಿದ ಬೆಲೆ ಏರಿಕೆ ಯಾವ ಭಾರತೀಯರಿಗೆ ಸಿಗುತ್ತಿದೆ ಹೇಳಿ ಎಂದರು.

ನಾವು ನಮ್ಮ ಪ್ರಣಾಳಿಕೆಯಲ್ಲಿ ಆರ್ಥಿಕ, ಸಾಮಾಜಿಕ, ಜಾತಿ ಗಣತಿ ಬಗ್ಗೆ ಭರವಸೆ ಕೊಟ್ಟಿದ್ದೇವು. ನಾವು ಮಾಡಿದ ಘೋಷಣೆಯಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ರಾಹುಲ್ ಗಾಂಧಿಯವರು ಪಾರ್ಲಿಮೆಂಟಿನಲ್ಲಿ ನಿರಂತರ ಧ್ವನಿ ಎತ್ತಿ ಹೋರಾಟ ನಡೆಸಿದ್ದರು. ಇದರ ಪರಿಣಾಮ ಈಗ ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ಜಾತಿ ಗಣತಿಗೆ ಮುಂದಾಗಿದೆ. ಇದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸೈದ್ಧಾಂತಿಕ ಬದ್ಧತೆಗೆ ಸಿಕ್ಕ ಗೆಲುವು ಎಂದರು.

ಪ್ರಲ್ಹಾದ ಜೋಶಿಯವರೇ, ಹುಬ್ಬಳ್ಳಿ-ಧಾರವಾಡ ಸುತ್ತಲಿನ ಭಾಗಕ್ಕೆ ಮಹದಾಯಿ ನದಿ ನೀರು ಕೊಡುತ್ತೇವೆಂದು ಸುಳ್ಳು ಹೇಳಿದ್ದೀರಿ. ಯಡಿಯೂರಪ್ಪ ಅವರು ಹುಬ್ಬಳ್ಳಿ ಸಮಾವೇಶದಲ್ಲಿ ಇನ್ನೇನು ಮಹದಾಯಿ ಜಾರಿಗೊಳ್ಳುತ್ತದೆ ಎಂಬಂತೆ ಮಾತನಾಡಿದ್ದರು. ಗೋವಾ ಮುಖ್ಯಮಂತ್ರಿ ಮಹದಾಯಿಗೆ ಅನುಮತಿ ನೀಡಿದ್ದಾರೆಂದು ಯಡಿಯೂರಪ್ಪ ಸುಳ್ಳು ಹೇಳಿದರು. ಆದರೆ, ಇದುವರೆಗೆ ಪರಿಸರ ಇಲಾಖೆಯೇ ಅನುಮೋದನೆ ನೀಡಿಲ್ಲ. ಪರಿಸರ ಇಲಾಖೆ ಅನುಮೋದನೆ ನೀಡಿದ ತಕ್ಷಣ ನಾವು ಮಹದಾಯಿ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲ, ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಿವರಾಜ ತಂಗಡಗಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖಂಡರಾದ ನಾಸೀರ ಹುಸೇನ, ವಿನಯಕುಮಾರ ಸೊರಕೆ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net