ಒಳಮೀಸಲಾತಿ ವಿಚಾರವಾಗಿ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ : ಎಂಎಲ್‌ಸಿ ಡಿ.ತಿಮ್ಮಯ್ಯ ಆಕ್ರೋಶ

MLC Thimmaiah
Published on

ಮೈಸೂರು: ಪರಿಶಿಷ್ಟಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯಸರ್ಕಾರ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ವರದಿಯ ನಿರೀಕ್ಷೆಯಲ್ಲಿದೆ. ಹೀಗಿದ್ದರೂ ಬಿಜೆಪಿ ನಾಯಕರು ರಾಜಕೀಯ ಪ್ರೇರಿತ ಹೋರಾಟ ನಡೆಸಿ ಸಮಾಜವನ್ನು ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಆರೋಪಿಸಿದರು.

ಬಿಜೆಪಿ ನಾಯಕರು ಆ.1 ಮತ್ತು 16 ರಂದು ನಡೆಸುತ್ತಿರುವ ಹೋರಾಟಕ್ಕೂ ದಲಿತ ಸಮುದಾಯಕ್ಕೂ ಸಂಬಂಧವಿಲ್ಲ. ಇದೊಂದು ರಾಜಕೀಯಪ್ರೇರಿತ ಹೋರಾಟವಾಗಿದೆ. ಮೀಸಲಾತಿ ವರ್ಗೀಕರಣ ಮಾಡಲು ಅಂದಿನ ಕಾಂಗ್ರೆಸ್ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚನೆ ಮಾಡಿತ್ತು. ವರದಿ ನೀಡುವಾಗ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ಆದರೆ, ಅಂದು ಒಳ ಮೀಸಲಾತಿ ಜಾರಿಗೆ ಬಿಜೆಪಿ ಹಿಂದೇಟು ಹಾಕಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಒಳಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಹೇಳಿಕೆ ನೀಡಿದ್ದರು. ಈಗ ಯಾವ ಮುಖ ಹೊತ್ತುಕೊಂಡು ಕಾಂಗ್ರೆಸ್ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿ ಮಾಡಿ ಎನ್ನುತ್ತಾರೆ. ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಎಂ.ಕಾರಜೋಳ ಅವರು ಬಿಜೆಪಿ ಸರ್ಕಾರ ಇದ್ದಾಗ ಈ ಬಗ್ಗೆ ಒತ್ತಾಯ ಮಾಡಲೇ ಇಲ್ಲ. ಪ್ರಚಾರದ ಗೀಳಿಗೆ ಮತ್ತು ಅದನ್ನೇ ಕಸುಬನ್ನಾಗಿಸಿಕೊಂಡಿರುವ ಈ ಇಬ್ಬರೂ ನಾಯಕರು ಆ.1ರಂದು ಪ್ರತಿಭಟನೆ ಮಾಡುತ್ತೇವೆಂದು ನೀಡಿರುವ ಹೇಳಿಕೆ ನಾಚಿಕೆಗೇಡು ಎಂದರು.

ಒಳ ಮೀಸಲಾತಿ ಬಗ್ಗೆ ನೈಜ ಕಾಳಜಿ ಹೋರಾಟವನ್ನು ನಾವು ಬೆಂಬಲಿಸುತ್ತೇವೆ. ಬಿಜೆಪಿ ಸರ್ಕಾರವಿದ್ದಾಗ ಒಳ ಮೀಸಲಾತಿ ಜಾರಿ ಮಾಡಲಾಗದವರು ಹಾಗೂ ಜಾರಿ ಮಾಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ ಎಂದವರು ಈಗ ವೀರಾವೇಷದ ಮಾತುಗಳನ್ನಾಡುತ್ತಿದ್ದಾರೆ. ಈ ನಾಯಕರ ಹೋರಾಟ ರಾಜಕೀಯ ಲಾಭಕ್ಕಾಗಿಯೇ ಹೋರತು ಸಮುದಾಯದ ಅಭಿವೃದ್ಧಿಗೆ ಅಲ್ಲ ಎಂದು ಲೇವಡಿ ಮಾಡಿದರು.

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹೋರಾಡುತ್ತಿರುವ ಭಾಸ್ಕರ್ ಪ್ರಸಾದ್ ಯಾರೆಂಬುದು ಗೊತ್ತಿಲ್ಲ. ಈತನಕ ಎಲ್ಲಿದ್ದರು? ಏನಾಗಿದ್ದರು? ಸಮಾಜದ ಬಗ್ಗೆ ಅವರು ಏನು ಮಾಡಿದ್ದಾರೆ? ಬಿಜೆಪಿನಾಯಕರ ಕುಮ್ಮಕ್ಕಿನಿಂದ ನಡೆಯುತ್ತಿರುವ ಹೋರಾಟಕ್ಕೆ ಸಮುದಾಯದ ಜನರು ಮನ್ನಣೆ ನೀಡಬಾರದು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ನಾರಾಯಣ, ತಾ.ಪಂ.ಮಾಜಿ ಅಧ್ಯಕ್ಷ ಮರಯ್ಯ, ಆದಿಜಾಂಬವ ಮಹಾಸಭಾ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಎಡತೊರೆ ನಿಂಗರಾಜು, ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹುಣಸೂರು ಬಸವಣ್ಣ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net