ಜನರ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ

TIMMAPUR
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಂದ್ರದಿಂದ ಅನ್ಯಾಯ ಮುಂದುವರಿದರೆ ಜನರು ಪ್ರತ್ಯೇಕ ದೇಶಕ್ಕೆ ಬೇಡಿಕೆ ಮಂಡಿಸಬಹುದು ಎಂದು ಸಂಸದ ಡಿ.ಕೆ. ಸುರೇಶ ಹೇಳಿದ್ದನ್ನು ಬಿಜೆಪಿಯವರು ತಿರುಚಿದ್ದಾರೆ. ಯಾವುದಾದರೂ ಒಂದು ಹೇಳಿಕೆ ತಿರುಚಿ ಗಲಾಟೆ, ಗದ್ದಲ ಎಬ್ಬಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಸುರೇಶ ಅವರ ಹೇಳಿಕೆಯಲ್ಲಿ ಕಾಳಜಿ ಇದೆ. ಅದನ್ನು ಬಿಜೆಪಿಯವರು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ದೇಶದ ಸ್ವಾತಂತ್ರ್ಯ್ಕಾಗಿ ಹೋರಾಡಿದ ಪಕ್ಷ. ಬಿಜೆಪಿಯವರಂತೆ ಚುನಾವಣೆ ಸಂದಭರ್ದಲ್ಲಿ ಧರ್ಮ, ಜಾತಿಗಳ ನಡುವೆ ಕೋಮು ಭಾವನೆ ಕೆರಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಕ್ಷವಲ್ಲ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ, ಬರ ಪರಿಹಾರ ಹಣ ಹಾಗೂ ತೆರಿಗೆ ಹಣ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ನಮ್ಮ ಪಾಲಿನ ಹಣ ನೀಡುವಂತೆ ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆ ಬೇಡುತ್ತಿಲ್ಲ. ಬಿಜೆಪಿ ನಾಯಕರಿಗೆ ದೇಶ, ರಾಜ್ಯದ ಅಭಿವೃದ್ಧಿ ಬೇಕಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಐದು ಗ್ಯಾರಂಟಿಗಳು ಸಮರ್ಪಕವಾಗಿ ಅನುಷ್ಠಾನಗೊಂಡಿರುವ ಕಾರಣಕ್ಕೆ ಇಂಥ ಬರಗಾಲದಲ್ಲೂ ಜನರು ಸಹನೀಯವಾಗಿ ಜೀವನ ನಡೆಸುತ್ತಿದ್ದಾರೆ. ಬಿಜೆಪಿಗರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಲಿಷ್ಠ ಸರ್ಕಾರವನ್ನು ಬೀಳಿಸಬೇಕೆಂಬ ಕಾರಣಕ್ಕಾಗಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net