ಮೈಸೂರು: ಸಂವಿಧಾನ ಬದಲಿಸುವ ಸಲುವಾಗಿಯೇ ಪ್ರಧಾನಿ ನರೇಂದ್ರ ಮೋದಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿಕೊಡಿ ಎಂದು ಹೇಳುತ್ತಿದ್ದಾರೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಕಾರ್ಯಕಾರಿ ಮಂಡಳಿ ಸದಸ್ಯ ಎಚ್.ಆರ್.ಶೇಷಾದ್ರಿ ಆರೋಪಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದಿಂದ ನಗರದ ಜಾವಾ ರೋಟರಿ ಶಾಲೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿಗೆ ಇನ್ನೊಂದು ಅವಧಿಗೆ ಅಧಿಕಾರ ಕೊಟ್ಟರೆ ಸಂವಿಧಾನ ಬದಲಾಯಿಸುವುದರಲ್ಲಿ ಆಶ್ಚರ್ಯವಿಲ್ಲ. ಅದಕ್ಕಾಗಿಯೇ ತಯಾರಿಯನ್ನೂ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳುತ್ತಿರುವುದೇ ಸಂವಿಧಾನ ಬದಲಿಸುವುದರ ಹುನ್ನಾರವಾಗಿದೆ ಎಂದು ತಿಳಿಸಿದರು.
ಸಂವಿಧಾನದ ಬದಲಾವಣೆ ಮಾತುಗಳು ಆ ಪಕ್ಷದವರಿಂದಲೇ ಆಗಾಗ ಕೇಳಿಬರುತ್ತಿವೆ. ಇದರ ಒಳಸಂಚು ಇರುವುದರಿಂದಲೇ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಮೋದಿ ಅವರು ಇನ್ನೊಂದು ಅವಧಿಗೆ ಪ್ರಧಾನಿಯಾಗಿ, ಸಂವಿಧಾನ ಬದಲಾಯಿಸಿ ರಾಷ್ಟ್ರಪತಿಯೂ ಆಗಬಹುದು ಎಂದು ಹೇಳಿದರು.
ದಶಕದಿಂದಲೂ ದೇಶದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಸಹಕರಿಸುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡದೇ ಕೇವಲ ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿದೆ. ದೇಶದ ಶ್ರೀಮಂತರು ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಬಡವರು ಅತಿ ಬಡವರಾಗುತ್ತ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದರು.
ಜಾತಿ, ಧರ್ಮ ಸೇರಿದಂತೆ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಇದೀಗ ಕಾಲ ಬದಲಾಗಿದೆ. ಭಾವನಾತ್ಮಕ ವಿಷಯ ಹೆಚ್ಚು ದಿನ ನಡೆಯುವುದಿಲ್ಲ. ಕಾರ್ಮಿಕರು, ರೈತರು, ಬಡವರು ಎಚ್ಚೆತ್ತುಕೊಂಡಿದ್ದಾರೆ ಎಂದು ಹೇಳಿದರು.
ಕೆಲ ಸಮೀಕ್ಷೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ ಪ್ರಮುಖ ಚುನಾವಣಾ ವಿಷಯ ಎಂದು ಹೇಳುತ್ತಿವೆ. ಅಲ್ಲದೆ ಬಹುಸಂಖ್ಯಾತರು ದೇಶಕ್ಕಾಗಿ ಎಲ್ಲರೂ ಒಟ್ಟಾಗಿ ಬಾಳಬೇಕು ಎಂದು ಹೇಳುತ್ತಿದ್ದಾರೆ. ಇದು ಎಲ್ಲ ಧರ್ಮದವರ ಆಲೋಚನೆ ಇದಾಗಿದೆ. ಸಾಮರಸ್ಯ, ಸೌಹಾರ್ದ ಗಟ್ಟಿಯಾಗಬೇಕು ಎಂದಿರುವುದು ಆಶಾಭಾವನೆ ಮೂಡಿಸಿದೆ ಎಂದರು.
ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರಲ್ಲಿ ಕೊಳ್ಳುವ ಶಕ್ತಿ ಬರಿದಾಗಿದೆ. ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಎಎಪಿ ಜಿಲ್ಲಾಧ್ಯಕ್ಷ ರಂಗಯ್ಯ, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಿಪಿಎಂಎಲ್ ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಸರ್ವೋದಯ ಕರ್ನಾಟಕದ ಉಗ್ರನರಸಿಂಹೇಗೌಡ, ಸಮಾಜವಾದಿ ಸವಿತಾ ಪ.ಮಲ್ಲೇಶ್, ಸಿಪಿಐನ ಕೆ.ಜಿ.ಸೋಮರಾಜೇ ಅರಸು, ಎಚ್.ಬಿ.ರಾಮಕೃಷ್ಣ ಇತರರು ಇದ್ದರು.