

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ, ಸುತ್ತಲಿನ ದೇವಸ್ಥಾನಗಳ ಮೇಲೆ ಕಲ್ಲು ತೂರಿ, ಪೊಲೀಸ್ ಜೀಪ್ಗೆ ಬೆಂಕಿ ಹಚ್ಚಿ, ಪೊಲೀಸರನ್ನು ಗಾಯಗೊಳಿಸಿದ ಗಲಭೆಯಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ದಾಖಲಾಗಿದ್ದ ಪ್ರಕರಣ ಹಿಂಪಡೆಯಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಕ್ರಮವನ್ನು ಖಂಡಿಸಿರುವ ಬಿಜೆಪಿ, ಇದರ ವಿರುದ್ಧ ಕಾನೂನು ಹೋರಾಟ ಹಾಗೂ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದೆ.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರದಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ, ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿತ್ತು. ಅಂತಹ ಪ್ರಕರಣವನ್ನು ಮುಸ್ಲಿಂ ಓಲೈಕೆಗಾಗಿ ಹಿಂಪಡೆಯುತ್ತಿರುವುದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾದದ್ದು ಎಂದು ಆತಂಕ ವ್ಯಕ್ತಪಡಿಸಿದರು.
ಹಳೇ ಹುಬ್ಬಳ್ಳಿ ಗಲಭೆಯ ವಿಡಿಯೋವನ್ನು ಇಡೀ ರಾಷ್ಟ್ರ ವೀಕ್ಷಿಸಿದೆ. ಗಲಭೆಯಲ್ಲಿ ಪಾಲ್ಗೊಂಡಿದ್ದವರ ವಿಡಿಯೋ ತುಣುಕುಗಳನ್ನು ಆಧರಿಸಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದರು. ಇದೀಗ ಅವರಲ್ಲಿ ಕೆಲವರು ಅಮಾಯಕರಿದ್ದಾರೆಂಬ ಕಾರಣವೊಡ್ಡಿ ಎಲ್ಲ ಆರೋಪಿಗಳ ವಿರುದ್ಧದ ಆರೋಪಗಳನ್ನು ಖುಲಾಸೆಗೊಳಿಸುತ್ತಿರುವುದು ಸರಿಯಲ್ಲ ಎಂದು ಅರವಿಂದ ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ 46 ಪ್ರಕರಣಗಳನ್ನು ಖುಲಾಸೆಗೊಳಿಸಲು ತೀರ್ವನಿಸಲಾಗಿದ್ದು, ಅದರಲ್ಲಿ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವೂ ಸೇರಿದೆ. ದುಷ್ಟಶಕ್ತಿಗಳನ್ನು ದಮನಗೊಳಿಸುವುದು ಅಧಿಕಾರದಲ್ಲಿರುವ ಸರ್ಕಾರದ ಕೆಲಸ. ಆದರೆ, ಕಾಂಗ್ರೆಸ್ ತನ್ನ ಕರ್ತವ್ಯದಿಂದ ವಿಮುಖವಾಗುತ್ತಿದೆ. ತುಷ್ಠೀಕರಣ ರಾಜಕಾರಣ ಬಹಳ ದಿನ ನಡೆಯುವುದಿಲ್ಲ ಎಂದು ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹಳೇ ಹುಬ್ಬಳ್ಳಿ ಗಲಭೆ ಕೋಮು ಗಲಭೆ ಅಲ್ಲ. ಬಂಧಿತ ಆರೋಪಿಗಳು ಯಾವುದೇ ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಂಡವರು ಅಲ್ಲ. ಗಲಭೆಯಲ್ಲಿ ಪಾಲ್ಗೊಂಡವರು ಪೊಲೀಸ್ ಠಾಣೆ, ಪೊಲೀಸರ ಮೇಲೆ ದಾಳಿ ಮಾಡಿದವರು. ಅಂತವರನ್ನೇ ಖುಲಾಸೆಗೊಳಿಸಿದರೆ ಭವಿಷ್ಯದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆ ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದರು.
ಉಗ್ರವಾದಿಗಳನ್ನು ಬೆಂಬಲಿಸುತ್ತ ಬಂದಿರುವ ಕಾಂಗ್ರೆಸ್ ನೀತಿಯಿಂದಾಗಿಯೇ ಹಳೇ ಹುಬ್ಬಳ್ಳಿ ಗಲಭೆಗೆ ಇತಿಶ್ರೀ ಹಾಡಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಪ್ರಕರಣಕ್ಕೆ ಕೊನೆ ಹಾಡಲು ಯೋಜನೆ ಹಾಕಿತ್ತು ಎಂದು ದೂರಿದರು.
ಕೇಂದ್ರ ಸರ್ಕಾರ ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಕೊನೆಗೊಳಿಸಿ, ಅಲ್ಲಿ ಶಾಂತಿ ನೆಲೆಸುವಂತೆ ಮಾಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಶಾಂತಿ ಕದಡಲು ಮುಂದಾಗಿದೆ ಎಂದು ದೂರಿದರು.
ಮುಡಾ ಹಗರಣದಿಂದಾಗಿ ರಾಜೀನಾಮೆ ಕೊಡಬೇಕಾದೀತು ಎಂಬ ಆತಂಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ವಿವಿಧ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿದ್ದಾರೆ. ವಿಜಯದಶಮಿ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರೀಕ್ಷೆ ಇದೆ. ಈಗಾಗಲೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟೆ ನಡೆದಿದೆ ಎಂದರು.
ಸರ್ಕಾರದ ಕ್ರಮ ಖಂಡಿಸಿ, ಹೋರಾಟ ಮಾಡಲಾಗುವುದು. ಇನ್ನೊಂದೆರೆಡು ದಿನಗಳಲ್ಲಿ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ಅಮೃತ ದೇಸಾಯಿ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವಕ್ತಾರ ರವಿ ನಾಯಕ ಇದ್ದರು.
- ಮಹೇಶ ಟೆಂಗಿನಕಾಯಿ, ಶಾಸಕ