

ನಾಪೋಕ್ಲು: ರಾಜ್ಯದ ಬಿಜೆಪಿ ಸರ್ಕಾರ ಜನಹಿತ ಯೋಜನೆಗಳನ್ನು ಜಾರಿಗೆ ತರುವ ಬದಲು ಅನ್ಯ ಪಕ್ಷದಿಂದ ವಲಸೆ ಬಂದವರಿಗೆ ಮಣೆ ಹಾಕುವ ಕಾಯಕದಲ್ಲಿ ನಿರತವಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ಆರೋಪಿಸಿದರು.
ಅರಣ್ಯ ಇಲಾಖೆಯಲ್ಲಿ 17 ಪ್ರಕರಣಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ಸಚಿವ ಸ್ಥಾನ ನೀಡಿರುವುದು ದುರಂತ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಜನಪರ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಪಾಕಿಸ್ತಾನದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಿದೆ. ಕೇಂದ್ರ ಸರ್ಕಾರ ಆರ್ಥಿಕ ನೀತಿಯಿಂದಾಗಿ ದಿನೇ ದಿನೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆ ದುಬಾರಿಯಾಗಿದೆ. ಇದು ಈ ದೇಶದ ಜನರಿಗೆ ದೊರೆತ ಅಚ್ಛೇದಿನ್ ಎಂದು ಆರೋಪಿಸಿದರು.
ಸಿಎಎ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ದೇಶದ ಯುವ ಸಮೂಹದ ಸಮಸ್ಯೆಗಳಿಗೆ ಸ್ಪಂದಿಸಿ ಉದ್ಯೋಗ ಸೃಷ್ಟಿಯನ್ನು ಮಾಡದೆ ಗುಂಡು ಹಾರಿಸುವಂತೆ ಪ್ರಚೋದನೆ ನೀಡುತ್ತಿರುವ ಸಚಿವರ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಆದೇಶದ ಮೇರೆಗೆ ಕಾಂಗ್ರೆಸ್‌ನ ಬ್ಲಾಕ್ ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಅದರಂತೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕೆ.ಎ.ಇಸ್ಮಾಯಿಲ್ ಅವರನ್ನು ನೇಮಕಮಾಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮಾನಾಥ್, ಕಿಸಾನ್ ಘಟಕದ ಜಿಲ್ಲಾ ಸಂಚಾಲಕ ನೆರವಂಡ ಉಮೇಶ್, ಮುಖಂಡರಾದ ಪಿ.ಎಂ.ಖಾಸಿಂ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಇದ್ದರು.