ಜಾತಿ ವಿಷಬೀಜ ಬಿತ್ತುವಲ್ಲಿ ಬಿಜೆಪಿಯವರು ಮುಂದೆ

Published on

ಮದ್ದೂರು: ಬಿಜೆಪಿ ಮುಖಂಡರು ಜಾತಿ ವಿಷಬೀಜ ಬಿತ್ತುವಲ್ಲಿ, ಜಾತಿ, ಮತ, ಪಂಗಡಗಳನ್ನು ಹುಟ್ಟುಹಾಕುವುದರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಶಾಸಕ ಕೆ.ಎಂ.ಉದಯ ಟೀಕಿಸಿದರು.

ಮದ್ದೂರು ತಾಲೂಕಿನ ನೀಲಕಂಠನಹಳ್ಳಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಭಾರತೀಯ ಸಂಸ್ಕೃತಿಯಲ್ಲಿ ಸರ್ವಧರ್ಮದವರು ಸಹಬಾಳ್ವೆಯ ಹೆಸರಾಗಿದ್ದು, ಅವರವರ ಧರ್ಮಗಳ ಹಬ್ಬಗಳ ವೇಳೆ ಹಿಂದುಗಳು, ಮುಸ್ಲಿಮರು ಮತ್ತು ಕ್ರೈಸ್ತರು ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದು ಇದನ್ನು ಸಹಿಸದ ಬಿಜೆಪಿ ಒಡಕುಂಟು ಮಾಡಲು ಮುಂದಾಗಿದೆ ಎಂದರು.

ನಾಡಿನ ಅದಿ ದೇವತೆ ಚಾಮುಂಡೇಶ್ವರಿ ಎಲ್ಲ ವರ್ಗ ಜಾತಿ ಮತದ ಆರಾಧ್ಯ ದೇವಿಯಾಗಿದ್ದು ಅವರವರ ಭಕ್ತಿಗೆ ಅನುಸಾರ ಪ್ರತಿ ಧರ್ಮದವರು ದೇವಿಯ ದರ್ಶನದೊಡನೆ ತಮ್ಮ ಭಕ್ತಭಾವ ಸಮರ್ಪಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯಂತೆ ಚಾಮುಂಡೇಶ್ವರಿ ಎಲ್ಲ ಜಾತಿ ಮತಗಳ ಜನರ ನೆಚ್ಚಿನ ದೇವರೆಂದರು.

ಮುಂಬರುವ ದಸರಾ ಉತ್ಸವ ಉದ್ಘಾಟನೆಗೆ ಸಾಹಿತಿ ಬಾನುಮುಷ್ತ್ತಾಕ್ ಅವರನ್ನು ಆಯ್ಕೆ ಮಾಡಿರುವ ಕುರಿತು ಸ್ಪಷ್ಟನೆ ನೀಡಿದ ಅವರು ಸಾಹಿತಿಯಾಗಿ ಭಾರತೀಯರು ಮತ್ತು ರಾಜ್ಯದ ಪ್ರಜೆಯಾಗಿರುವ ಬಾನುಮುಷ್ತಾಕ್ ಅವರಿಗೆ ದಸರಾ ಮಹೋತ್ಸವ ಉದ್ಘಾಟಿಸುವ ಅರ್ಹತೆ ಇದೆ ಎಂದರು.

ಮಾಜಿ ಸಂಸದ ಪ್ರತಾಪ್‌ಸಿಂಹ ದಸರಾ ಉದ್ಘಾಟಕರು ಹಣೆಗೆ ಕುಂಕುಮ ಹಚ್ಚಿ ಚಾಲನೆ ನೀಡಲೆಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶಾಸಕ ಕೆ.ಎಂ.ಉದಯ ಕುಂಕುಮ, ಸ್ಟಿಕ್ಕರ್, ವಿಭೂತಿ, ಧರಿಸುವ ಕಾರ್ಯ ಅವರವರ ಇಚ್ಚೆಗೆ ಸೇರಿದ್ದಾಗಿದ್ದು ಇದೇ ರೀತಿ ಇರಬೇಕೆಂದು ಹೇಳಲು ಅವರ‌್ಯಾರು ಎಂದು ಪ್ರಶ್ನಿಸಿದರು.

ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್‌ಗೆ ಮುಂದಿನ ಐದು ವರ್ಷಗಳ ಸಹಕಾರಿ ವರ್ಷದ ಚುನಾವಣೆ ಸಂಬಂಧ ಮದ್ದೂರು ವ್ಯಾಪ್ತಿಯಿಂದ ವಿ.ಎಸ್.ಎಸ್.ಎನ್.ಬಿ ಮತ್ತು ಎಂ.ಪಿ.ಸಿ.ಎಸ್ ಕ್ಷೇತ್ರದಿಂದ ತಲಾ ಒಂದು ಸ್ಥಾನವಿದ್ದು ಎರಡು ಸ್ಥಾನಗಳ ಅಭ್ಯರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಡನೆ ಚರ್ಚಿಸಿ ಮುಂದಿನ ಎರಡು ದಿನಗಳಲ್ಲಿ ಅಂತಿಮಗೊಳಿಸಿ ಪ್ರಕಟಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಕದಲೂರು ಗ್ರಾ.ಪಂ. ಅಧ್ಯಕ್ಷ ತಿಮ್ಮೇಗೌಡ, ಕೆ.ಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ಕೆಂಪರಾಜು, ಆರ್.ಸಿ.ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net