ಭಾಜಪ ಸಾಮಾಜಿಕ ನ್ಯಾಯದ ವಿರೋಧಿ

CTD 12 Cong
Published on

ಚಿತ್ರದುರ್ಗ: ರಾಜ್ಯದಲ್ಲಿ ಹೊಸದಾಗಿ ಆರಂಭಗೊಂಡ ಕೆಪಿಸಿಸಿ ಸಾಮಾಜಿನ ನ್ಯಾಯ ಘಟಕ ಪಕ್ಷದ ಬಲವರ್ಧನೆಗೆ ಆದ್ಯತೆ ನೀಡಲಿದ್ದು, ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಘಟಕದ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜಾತಿ-ಬೇಧವಿಲ್ಲದೆ, ಸಣ್ಣ ಸಮುದಾಯಗಳನ್ನು ಸೇರ್ಪಡೆಗೊಳಿಸಿ, ಅದರಲ್ಲಿ ಶೇ.50ರಷ್ಟು ಮಹಿಳೆಯರು ಕಡ್ಡಾಯವಾಗಿ ಇರಬೇಕು. ಆ ನಿಟ್ಟಿನಲ್ಲಿ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಉದಯಿಸಿದ ಕಾಲದಿಂದಲೂ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಆದಿವಾಸಿಗಳು, ದಲಿತರು, ಮಹಿಳೆಯರ ಮೇಲೆ ದಬ್ಬಾಳಿಕೆ ಸೇರಿ ಅನ್ಯಾಯ ಉಂಟಾಗಿದೆ. ಹೀಗಿರುವಾಗ ಸಾಮಾಜಿಕ ನ್ಯಾಯ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ತಳಸಮುದಾಯಗಳ ಕುರಿತು ಗೌರವವಿಲ್ಲ. ಸ್ತ್ರೀ ಸಮಾನತೆ ಇಷ್ಟವಿಲ್ಲ. ಹೀಗಾಗಿ ಕಾಂಗ್ರೆಸ್‌ನ ಈ ಘಟಕ ಎಲ್ಲ ಸಮುದಾಯದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಮನ್ ಫರ್ಜಾನ, ನಾಗರಾಜ್, ಉಪಾಧ್ಯಕ್ಷೆ ಪದ್ಮಾ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಎಸ್.ಎನ್.ರವಿಕುಮಾರ್, ಸುದರ್ಶನ್, ಮುದಸಿರ್ ನವಾಜ್, ಬಾಲಕೃಷ್ಣಸ್ವಾಮಿ, ಅಶೋಕ್ ನಾಯ್ಡು, ಚಳ್ಳಕೆರೆ ಪ್ರಸನ್ನಕುಮಾರ್ ಇತರರಿದ್ದರು.

ದೇಶದಲ್ಲಿ ಕ್ರಾಂತಿ ಅಗತ್ಯ: ಯೂರೋಪ್‌ನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿಯಾಯಿತು. ಅದೇ ರೀತಿ ದೇಶದಲ್ಲಿಯೂ ಆಗಬೇಕಿದೆ ಎಂದು ಕೆಪಿಸಿಸಿ ಸಾಮಾಜಿನ ನ್ಯಾಯ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಚಮನ್ ಫರ್ಜಾನ ಹೇಳಿದರು. ಈ ಸಂಬಂಧ ರಾಜಸ್ಥಾನದ ಉದಯಪುರ್‌ನಲ್ಲಿ ರಾಹುಲ್ ಗಾಂಧಿ ಬೃಹತ್ ಚಿಂತನಾ ಶಿಬಿರ ನಡೆಸಲಾಗಿತ್ತು. ಅಲ್ಲಿನ ನಿರ್ಣಯಗಳಂತೆ ಘಟಕಗಳ ರಚನೆಗೆ ಒತ್ತು ಕೊಡಬೇಕಿದೆ ಎಂದರು. ಅಸಮಾನತೆ ದೇಶದಲ್ಲಿ ತಾಂಡವವಾಡುತ್ತಿದೆ. ಹೀಗಾಗಿ ಸಮ ಸಮಾಜ ನಿರ್ಮಾಣಕ್ಕೆ ಘಟಕ ಶ್ರಮಿಸಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net