

ಧಾರವಾಡ: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಕುಸಿಯುತ್ತಿದ್ದು, ಲೀಡರ್‌ಲೆಸ್ ಪಾರ್ಟಿಯಾಗಿದೆ. ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವುದು ಶೋಚನೀಯ ಸ್ಥಿತಿಗೆ ನಿದರ್ಶನ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೆಲವರ ಹಿಡಿತದಲ್ಲಿದೆ. ಒಂದು ಪಕ್ಷ ಕೆಲವರ ಹಿಡಿತಕ್ಕೆ ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದರು.
* ಬಿಜೆಪಿಯವರು ಕಾಂಗ್ರೆಸ್‌ಗೆ ಬರುತ್ತಾರೆ:
ಕೆಲವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದೇ ಬರುತ್ತಾರೆ. ಈ ಪ್ರಕ್ರಿಯೆ ಒಂದೇ ದಿನ ಆಗುವುದಲ್ಲ. ಮಾತುಕತೆಗಳು ನಡೆದಿದ್ದು, ಪಕ್ಷಕ್ಕೆ ಕರೆದುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಿಲ್ಲೆ ಮಾತ್ರವಲ್ಲ, ರಾಜ್ಯದ ಬಗ್ಗೆ ನಾನು ಮಾತನಾಡುತ್ತಿರುವೆ. ಬಹಳಷ್ಟು ಜನ ಸಂಪರ್ಕದಲ್ಲಿ ಇದ್ದಾರೆ. ಕರೆದುಕೊಳ್ಳುವ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
* ಜನರಿಗೆ ಖುಷಿ ‘ಗ್ಯಾರಂಟಿ’:
ಚುನಾವಣೆಗೂ ಮೊದಲು ಕಾಂಗ್ರೆಸ್ 5 ಗ್ಯಾರಂಟಿಗಳನ್ನು ೋಷಿಸಿತ್ತು. ಇದಕ್ಕೆಲ್ಲ ಎಲ್ಲಿಂದ ಹಣ ತರುತ್ತಾರೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಈಗ ಅನುಷ್ಠಾನ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಣ ನಿಗದಿ ಮಾಡಿದ್ದರಿಂದ 4 ಗ್ಯಾರಂಟಿಗಳು ಜಾರಿಗೆ ಬಂದಿವೆ. ಜನ ಖುಷಿಯಲ್ಲಿದ್ದಾರೆ. ಯಾವ ರಾಜ್ಯದಲ್ಲೂ ಇಂತಹ ಯೋಜನೆ ಜಾರಿಯಾಗಿಲ್ಲ. ದೇಶದ ಇತಿಹಾಸದಲ್ಲಿ ಇದು ಮೊದಲು. ಹೀಗಾಗಿ ನುರಿತ ತಜ್ಞರು ಈ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ ಎಂದರು.