

ಶಿವಮೊಗ್ಗ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ದೂರಿದರು.
ಕಳೆದೊಂದು ವಾರದಿಂದ ಅಧಿವೇಶನ ನಡೆಯುತ್ತಿದ್ದು ಮುರ್ನಾಲ್ಕು ದಿನದಲ್ಲಿ ಅಧಿವೇಶನ ಮುಕ್ತಾಯ ಆಗಲಿದೆ. ರಾಜ್ಯದ ಜನತೆ ನಿರೀಕ್ಷೆ ಇಟ್ಟುಕೊಂಡು ಅಧಿವೇಶನ ಗಮನಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಡೆಯಲು, ಕುಡಿಯುವ ನೀರಿನ ಹಾಹಾಕಾರ, ಮೇವಿನ ಕೊರತೆ ಸೇರಿ ಉತ್ತರ ಕರ್ನಾಟಕ ಭಾಗದ ಹತ್ತು ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷ ಗಮನ ಸೆಳೆಯಬೇಕಿತ್ತು. ಆದರೆ ಬಿಜೆಪಿ ಸಮರ್ಥವಾಗಿ ಚರ್ಚೆ ಮಾಡುವ ಬದಲು ದೌರ್ಬಲ್ಯ ಎದುರಿಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸದನ ವಿಫಲಗೊಳಿಸಿದ್ದಕ್ಕಾಗಿ ಎಲ್ಲ ಜವಾಬ್ದಾರಿಯನ್ನೂ ಬಿಜೆಪಿಯೇ ಹೊರಬೇಕಿದೆ. ಬಿಜೆಪಿ ಒಡೆದ ಮನೆಯಾಗಿದ್ದು ನಾಯಕರು ಅಸಮರ್ಥರಾಗಿದ್ದಾರೆ. ಚುನಾವಣೆ ಬಳಿಕ ಎರಡನೇ ಅಧಿವೇಶನ ಇದಾಗಿದ್ದು ಸದನದಲ್ಲಿ ಒಟ್ಟಾರೆ ಮಕ್ಕಳಾಟಿಕೆಯಂತೆ ನಡೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವರು ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ. ಇದು ಹೊಂದಾಣಿಕೆ ರಾಜಕಾರಣವೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸರ್ವಸಮ್ಮತ ಇಲ್ಲದೆ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲಾಗಿದೆ. ಏಳು ತಿಂಗಳು ಕಳೆದರೂ ವಿಧಾನ ಪರಿಷತ್ ನಾಯಕರು ಮತ್ತು ಉಪನಾಯಕನ ಆಯ್ಕೆ ಮಾಡಲು ರಾಜಕೀಯ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂಬುದು ದುರ್ದೈವದ ಸಂಗತಿ. ಬಿಜೆಪಿ ದೊಡ್ಡಮಟ್ಟದ ಆಂತರಿಕ ಬೇಗುದಿಯನ್ನು ಅನುಭವಿಸುತ್ತಿದೆ ಎಂದು ಆಯನೂರು ಮಂಜುನಾಥ ಲೇವಡಿ ಮಾಡಿದರು.
26 ಸಂಸದರಿದ್ದರೂ ಸಂಸತ್ ಅಧಿವೇಶನದಲ್ಲಿ ಕರ್ನಾಟಕದ ಸಮಸ್ಯೆ, ನೀರಾವರಿ ಬಗ್ಗೆ ಚರ್ಚೆಯೇ ಮಾಡಲಿಲ್ಲ. ಯಾವೊಬ್ಬ ಸಂಸದನೂ ಸಾಂಘಿಕ ಹೋರಾಟ ಮಾಡುತ್ತಿಲ್ಲ. ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ದೆಹಲಿ ಪ್ರವಾಸ ಹೋದ ಪುಟ್ಟ, ಬಂದ ಪುಟ್ಟ ಎಂಬತಾಗಿದೆ. ಬರ ಪರಿಹಾರ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ದೂರಿದರು.
ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ, ಮುಖಂಡರಾದ ಜೆ.ಪದ್ಮನಾಭ್, ಶಿ.ಜು.ಪಾಶಾ ಇದ್ದರು.