ತಂದೆ-ಮಗನ ಕಪಿಮುಷ್ಠಿಯಲ್ಲಿ ಬಿಜೆಪಿ

BJP in the clutches of father and son
ಬಿ.ಎಸ್. ಸಿಂಧೂರ
Published on

ಜಮಖಂಡಿ: ಬಿಜೆಪಿ ಹೈಕಮಾಂಡ್ ಹಲ್ಲಿಲ್ಲದ ಹಾವು ಇದ್ದಂತೆ. ಕೇವಲ ಬುಶ್ ಎನ್ನುವ ಹಾವಾಗಿ ಉಳಿದಿದೆ. ಇದರಿಂದ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ತಮ್ಮ ಸರ್ವಾಧಿಕಾರ ನಡೆಸಿ ಹಿರಿಯ ನಾಯಕರನ್ನು ಮೂಲೆಗುಂಪು ಮಾಡುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ರೈತ ಮುಖಂಡ ಬಿ.ಎಸ್. ಸಿಂಧೂರ ಟೀಕಿಸಿದರು.

ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಪುತ್ರ ವ್ಯಾಮೋಹದಿಂದ ರಾಜ್ಯ ಪ್ರವಾಸ ಕೈಗೊಳ್ಳಲು ತಯಾರಾಗಿದ್ದಾರೆ. ಇದು ರಾಜ್ಯದ ಜನತೆಗೆ ಮತ್ತು ಪಕ್ಷದ ಮುಖಂಡರಿಗೆ ಗೊತ್ತಾಗಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜಕೀಯ ಮುತ್ಸದ್ಧಿ ಏನಲ್ಲ್ಲ. ಹಿರಿಯ ನಾಯಕರನ್ನು ಕಡೆಗಣಿಸಿ ಅನುಭವವಿಲ್ಲದ ಯುವಕನಿಗೆ ರಾಜ್ಯಾಧ್ಯಕ್ಷ ಪಟ್ಟಕಟ್ಟಿ ಪಕ್ಷವನ್ನು ಹಾಳುಗೆಡವಲು ಹೊರಟಿರುವ ಬಿ.ಎಸ್. ಯಡಿಯೂರಪ್ಪನವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ಎಂದು ಕಿಡಿಕಾರಿದರು.

2019ರಲ್ಲಿ ರಮೇಶ ಜಾರಕಿಹೊಳಿ ಭಿನ್ನಮತಿಯಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಪ್ರಯತ್ನಿಸಿರುವುದನ್ನು ಅಪ್ಪ-ಮಗ ಮರೆತಿದ್ದಾರೆ. 2008ರಲ್ಲಿ ಡಿ ನೋಟಿಫಿಕೇಶನ್, ಪ್ರೇರಣಾ ಚೇಕ್ ಸೇರಿ ಹಲವು ಹಗರಣದ ಆರೋಪ ಹೊತ್ತು ಸಿಎಂ ಸ್ಥಾನದಿಂದ ಸ್ವ-ಇಚ್ಛೆಯಿಂದ ಕೆಳಗಿಳಿದಿದ್ದರೆ ರಾಜ್ಯದ ಜನತೆ ಅನುಕಂಪ ತೋರುತ್ತಿತ್ತು. ಆದರೆ ತಮ್ಮ ಹಗರಣ ಮುಚ್ಚಿಕೊಳ್ಳಲು ಅಲ್ಲಿಯೂ ನಾಟಕವಾಡಿ ಡಿ.ವಿ. ಸದಾನಂದಗೌಡರನ್ನು ಸಿಎಂ ಸ್ಥಾನಕ್ಕೆ ಕೂಡಿಸಿದರು. ಅವರು ಇವರ ತಾಳಕ್ಕೆ ಕುಣಿಯಲಿಲ್ಲ ಎಂದು ಮತ್ತೆ ಜಗದೀಶ ಶೆಟ್ಟರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು ಎಂದು ಜರಿದರು. 2013ರಲ್ಲಿ ಕೆಜೆಪಿ ಕಟ್ಟಿ ಬಿಜೆಪಿಯನ್ನು ಕೇವಲ 40 ಸ್ಥಾನಕ್ಕೆ ಸೀಮಿತಗೊಳಿಸಿದರು.

ಮತ್ತೆ 2014ರಲ್ಲಿ ಬಿಜೆಪಿ ಸೆರ್ಪಡೆಯಾಗಿ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಹೊರಟಿದ್ದಾರೆ. ಇದರಿಂದ ನಿಮ್ಮ ಪಕ್ಷದ ನಾಯಕರು ಸರಿಯಾದ ದಾರಿ ತೋರಿಸುತ್ತಾರೆ ಎಂದರು. ಕಾಂಗ್ರೆಸ್‌ನಲ್ಲಿ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಸಂಸ್ಕೃತಿ ಇದೆ. ನನ್ನ ಹಿರಿತನಕ್ಕೆ ಶೋಭೆ ತರುವ ಸ್ಥಾನಮಾನ ನೀಡುತ್ತಾರೆ ಎಂಬ ಅಚಲ ವಿಸ್ವಾಸವಿದೆ. ಆದರೆ, ಬಿಜೆಪಿಯಲ್ಲಿ ಇದ್ದಾಗ ಪ್ರತಿಕ್ಷಣ ಮಾನಸಿಕ ಹಿಂಸೆಯಿಂದ ನರಳಾಡುವ ಪರಿಸ್ಥಿತಿ ಇತ್ತು. ಬಿಎಸ್‌ವೈ ಈ ಹಿಂದೆ ಮನೆಗೆ ಬಂದು ಹೇಳಿದರೂ ಯಾವುದೇ ಗೌರವ ನೀಡಲಿಲ್ಲ. ಇದರಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ. ಇಲ್ಲಿ ಎಲ್ಲ ನಾಯಕರು ಗೌರವ ಇಟ್ಟಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net