ಕಾಂಗ್ರೆಸ್‌ ಗೆ ರೈತರ ಸಂಕಷ್ಟಕ್ಕಿಂತ ಜಾತಿ ಸಮೀಕ್ಷೆ ಮುಖ್ಯ; ಈರಣ್ಣಾ ಕಡಾಡಿ ಆಕ್ರೋಶ

IMG_20250927_122725.jpg
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಬೆಳಗಾವಿ ಸೇರಿ ರಾಜ್ಯಾದ್ಯಂತ ನಿರಂತರ ಮಳೆ,ನದಿಗಳ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ರೈತರು, ಕೂಲಿ ಕಾರ್ಮಿಕರ, ಜನಸಾಮಾನ್ಯರ ನೆರವಿಗೆ ಧಾವಿಸಿ, ಧೈರ್ಯ ತುಂಬಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಜಾತಿ ಜನಗಣತಿ ಹಿಂದೆ ಬಿದ್ದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ನದಿಗಳ ಪ್ರವಾಹ, ಮಳೆಯಿಂದ ಅಂದಾಜು 60 ಸಾವಿರ ಲಕ್ಷ ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಅವರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲೇ ನಿರತವಾಗಿದ್ದಾರೆ. ಪ್ರವಾಹಪೀಡಿತ ಸ್ಥಳಕ್ಕೆ ಹೋಗಿ ಜನರ ಸಂಕಷ್ಟ ಆಲಿಸುತ್ತಿಲ್ಲ ಎಂದು ದೂರಿದರು.

ಈಗಾಗಲೇ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹೆಸರು, ಉದ್ದು ಮತ್ತು ಸೂರ್ಯಕಾಂತಿ ಖರೀದಿಗೆ ಅನುಮತಿ ನೀಡಿದೆ.ಆದರೆ, ರಾಜ್ಯ ಸರ್ಕಾರವು ಕೇಂದ್ರ ತೆರೆಯದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತರು ಅಗ್ಗದ ದರದಲ್ಲಿ ತಮ್ಮ ಬೆಳೆಗಳನ್ನು ಮಾರುವ ಪರಿಸ್ಥಿತಿ ನಿರ್ಮಿಸಿದ್ದಾರೆ. ಕೂಡಲೇ ಬೆಂಬಲಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.

ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಸಂಪೂರ್ಣವಾಗಿ ಹಾನಿಗೊಳಗಾದ ಮನೆಗೆ 1ಲಕ್ಷ ರೂ., ಭಾಗರ್ಶ ಹಾನಿಯಾಗಿರುವ ಮನೆಗಳಿಗೆ 40 ಸಾವಿರ ರೂ. ಪರಿಹಾರ ನೀಡಬೇಕಿತ್ತು. ಆದರೆ, ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. ಬೆಳೆ ಹಾನಿ, ಪ್ರವಾಹ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಲಾಭಕ್ಕಾಗಿ ಸಚಿವ ಸತೀಶ ಜಾರಕಿಹೊಳಿ ಹುಕ್ಕೇರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಂಜೂರುಗೊಳಿಸಿದ್ದಾರೆ. ಮತ್ತೊಂದೆಡೆ ಖಾನಾಪುರ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪಿಕೆಪಿಎಸ್‌ಗಳಿಗೆ ಅನುದಾನ ನೀಡಿದ್ದಾರೆ. ಇವೆಲ್ಲವೂ ಚುನಾವಣೆ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ತಕ್ಷಣವೇ 5 ಲಕ್ಷ ರೂ.ಪರಿಹಾರ ಕೊಟ್ಟಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ಕಡಿಮೆ ಪರಿಹಾರ ಘೋಷಿಸಿದೆ. ಆದರೆ, ಅದನ್ನೂ ಕೊಟ್ಟಿಲ್ಲ. ಮನೆ ಕಳೆದುಕೊಂಡವರ ಬದುಕೀಗ ಬೀದಿಗೆ ಬಂದಿದೆ ಎಂದು ಹೇಳಿದರು.

ಮಾಜಿ ಶಾಸಕ ಅನಿಲ್ ಬೆನಕೆ, ಸಂಜಯ ಪಾಟೀಲ, ಪಾಲಿಕೆ ಸದಸ್ಯರಾದ ಹಣಮಂತ ಕೊಂಗಾಲಿ, ರಾಜಶೇಖರ ಡೋಣಿ, ಬಿಜೆಪಿ ನಗರ ಘಟಕದ ಅಧ್ಯಕ್ಷಗೀತಾ ಸುತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net