

ಬೆಳಗಾವಿ: ನದಿಗಳ ಪ್ರವಾಹ ಮತ್ತು ಅತಿವೃಷ್ಟಿಯಿಂದ ಸಂಪೂರ್ಣ ಹಾನಿಯಾಗಿರುವ ಕೃಷಿ ಜಮೀನುಗಳಿಗೆ ಶನಿವಾರ ಬಿಜೆಪಿ ನಿಯೋಗ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.ಬಳಿಕ ಸಂಕಷ್ಟದಲ್ಲಿರು ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದೆ.
ಸವದತ್ತಿ, ಯರಗಟ್ಟಿ, ರಾಮದುರ್ಗ, ಗೋಕಾಕ ಸೇರಿ ವಿವಿಧ ತಾಲೂಕಿನಲ್ಲಿ ಹಾನಿಯಾಗಿರುವ ಮೆಕ್ಕೆಜೋಳ, ಹೆಸರು, ಉದ್ದ, ಶೇಂಗಾ ಇತರೆ ಬೆಳೆಗಳನ್ನು ವೀಕ್ಷಿಸಿದರು. ಮತ್ತೊಂದೆಡೆ ಬೆಳೆಹಾನಿಯಿಂದ ರಾಶಿಯಾದ ಬೆಳೆಗಳ ಕಾಳು ಕಪ್ಪು ಬಣ್ಣಕ್ಕೆ ತಿರುಗಿರುವುದರಿಂದ ಸೂಕ್ತ ದರ ಸಿಗದೆ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ನಿಯೋಗದ ಮುಖಂಡರು ದೂರಿದ್ದಾರೆ.
ಬಿಜೆಪಿ ಸವದತ್ತಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಕಳೆದ ತಿಂಗಳ ಸುರಿದ ಧಾರಾಕಾರ ಮಳೆಯಿಂದ ಹಾಗೂ ರೋಗಗಳಿಂದ ಸಾಕಷ್ಟು ಕೃಷಿ ಬೆಳೆಗಳು ಹಾನಿಯಾಗಿವೆ. ಇದರಿಂದಾಗಿ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದ್ದು, ಕೂಡಲೇ ಸರ್ಕಾರವು ಮಧ್ಯಂತರ ಬೆಳೆಹಾನಿ ಪರಿಹಾರ ನೀಡಬೇಕು. ಬಳಿಕ ಸಮೀಕ್ಷೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಹಾನಿಪರಿಹಾರ ನೀಡಬೇಕು.ಸಂಕಷ್ಟದಲ್ಲಿರುವ ರೈತರಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸದೆ ನಿರ್ಲಕ್ಷೃ ಮಾಡುತ್ತಿದೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.