15ರಿಂದ ಜಿಲ್ಲಾ ಕೇಂದ್ರಗಳಲ್ಲಿ ತಿರಂಗಾ ಯಾತ್ರೆ

IMG-20250514-WA0005.jpg
Published on

- ಸುದ್ದಿಗೋಷ್ಠಿಯಲ್ಲಿ ಈರಣ್ಣಾ ಕಡಾಡಿ ಮಾಹಿತಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಪಾಕಿಸ್ತಾನ ವಿರುದ್ಧದ ‘ಆಪರೇಷನ್ ಸಿಂಧೂರ’ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮೇ 15 ರಿಂದ 20 ರವೆರೆಗೆ ಜಿಲ್ಲಾ ಕೇಂದ್ರ, ಮಂಡಲ ಕೇಂದ್ರಗಳಲ್ಲಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿರಂಗಾ ಯಾತ್ರೆ ಸಂಪೂರ್ಣ ಪಕ್ಷಾತೀತವಾಗಿರಲಿ ಎಂಬ ಕಾರಣಕ್ಕೆ ಪಕ್ಷ ಚಿಹ್ನೆ, ಪಕ್ಷದ ಬಾವುಟಗಳನ್ನು ಬಳಸುತ್ತಿಲ್ಲ. ಮೇ 15,16,17 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ 18,19,20ರಂದು ಎಲ್ಲ ಮಂಡಲ ಕೇಂದ್ರಗಳಲ್ಲಿ ಯಾತ್ರೆ ನಡೆಯಲಿದೆ. ರಾಷ್ಟ್ರ, ರಾಜ್ಯ ಮಟ್ಟದ ನಾಯಕರು ಜಿಲ್ಲಾ ಕೇಂದ್ರದ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈಗಾಗಲೇ ರಾಷ್ಟ್ರ ರಕ್ಷಣೆಗಾಗಿ, ಸೈನಿಕರ ಬೆಂಬಲಾರ್ಥವಾಗಿ ದೇಶ್ಯಾದ್ಯಂತ ಮೇ 14 ರಿಂದ 23ರವರೆಗೆ ತಿರಂಗಾ ಯಾತ್ರೆ ನಡೆಯಲಿರುವ ಯಾತ್ರೆಯಲ್ಲಿ ಕೇಂದ್ರ, ರಾಜ್ಯ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು ಸೇರಿ ಎಲ್ಲ ಕ್ಷೇತ್ರಗಳಲ್ಲಿ ಪ್ರಮುಖರು, ಗಣ್ಯರು ಭಾಗವಹಿಸಲಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಾರತೀಯ ಸೈನಿಕರಿಗೆ ಮತ್ತಷ್ಟು ಶಕ್ತಿ ತುಂಬಲಿದ್ದಾರೆ ಎಂದು ತಿಳಿಸಿದರು.

ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರವನ್ನು ಜತೆಗೆ ಭಾರತೀಯ ಸೈನಿಕರ ಶೌರ್ಯವನ್ನು ಇಡೀ ಜಗತ್ತು ನೋಡಿದೆ. ಭಾರತ ಮೊದಲಿನಂತಿಲ್ಲ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಮುಂದುವರಿದಿದೆ ಎಂಬುದನ್ನು ಜಗತ್ತಿಗೆ ಆಪರೇಷನ್ ಸಿಂಧೂರ ಮನದಟ್ಟು ಮಾಡಿಕೊಟ್ಟಿದೆ. ನಮ್ಮ ಸೈನಿಕರು ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. 100ಕ್ಕೂ ಅಧಿಕ ಭಯೋತ್ಪಾದಕರು, 40ಕ್ಕೂ ಅಧಿಕ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನ ಸುಧಾರಣೆ ಆಗದಿದ್ದರೆ ಭವಿಷ್ಯದ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ಬಿಜೆಪಿ ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net