ಅಧಿಕಾರ ಹಂಚಿಕೆ; ಸಿದ್ದು- ಡಿಕೆಶಿ ಯುದ್ಧ ಆರಂಭ; ಜಗದೀಶ್ ಶೆಟ್ಟರ್ ಟೀಕೆ

IMG-20250228-WA0031.jpg
Published on

ಬೆಳಗಾವಿ:ರಾಜ್ಯ ಸರ್ಕಾರದ ಅಧಿಕಾರ ಹಂಚಿಕೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ನಡುವೆ ಯುದ್ದ ಆರಂಭವಾಗಿದ್ದು, ಇವತ್ತೋ ನಾಳೆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಸಂಸದ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಒಳಜಗಳ ತೀವ್ರರೂಪ ಪಡೆದುಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಪರ ಸಚಿವರಾದ ಎಂ.ಬಿ. ಪಾಟೀಲ, ಕೆ.ಎನ್.ರಾಜಣ್ಣ ಸೇರಿ ಕೆಲ ಶಾಸಕರು ಮಾತನಾಡುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಒಬ್ಬಂಟಿಯಾಗಿರುವ ಡಿ.ಕೆ.ಶಿವಕುಮಾರ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣೀಟ್ಟಿರುವ ಡಿ.ಕೆ.ಶಿವಕುಮಾರ ಅವರು ಬೇರೆ ಬೇರೆ ರೂಪದಲ್ಲಿ ತಮ್ಮ ಆಸೆಯನ್ನು ಹೊರ ಹಾಕುತ್ತಿದ್ದಾರೆ. ಆದರೆ, ಅದಕ್ಕೆ ಕಾಂಗ್ರೆಸ್‌ನಲ್ಲಿ ಯಾರು ಮನ್ನಣೆ ಕೊಡುತ್ತಿಲ್ಲ. ಹೀಗಾಗಿಯೇ ಸರ್ಕಾರದಲ್ಲಿ ಅಭಿವೃದ್ಧಿಗಿಂತ ಅಧಿಕಾರ ಹಂಚಿಕೆ ವಿಷಯದಲ್ಲಿ ಗಲಾಟೆ ಆರಂಭವಾಗಿದೆ. ಒಬ್ಬರೊಬ್ಬರನ್ನು ಎತ್ತಿ ಕಟ್ಟಿ ಅಧಿಕಾರ ಗಟ್ಟಿಗೊಳಿಸುವಲ್ಲಿ ಸಚಿವರು ತೊಡಗಿದ್ದಾರೆ ಎಂದು ಟೀಕಿಸಿದರು. ಗಡಿ ವಿಷಯದಲ್ಲಿ ಸರ್ಕಾರ ವೈಫಲ್ಯ ಗಡಿ ಭಾಗದಲ್ಲಿ ಸಂಭವಿಸುವ ಪ್ರತಿಯೊಂದು ಘಟನೆಯನ್ನು ಭಾಷಾ ವಿಷಯವಾಗಿ ಪರಿವರ್ತನೆವಾಗುವುದು ನನಗೆ ಇಷ್ಟವಿಲ್ಲ. ಬೆಳಗಾವಿ ನಗರ, ಗ್ರಾಮೀಣ ಭಾಗದಲ್ಲಿ ಎಲ್ಲಿಯೂ ಭಾಷಾ ಸಮಸ್ಯೆ ಇಲ್ಲವೇ ಇಲ್ಲ. ಎಲ್ಲ ಭಾಷಿಕರು ಪರಸ್ಪರ ಅನ್ಯೂನವಾಗಿದ್ದಾರೆ. ಹಾಗಾಗಿ ಎಲ್ಲ ಸಮಸ್ಯೆಗಳನ್ನು ಭಾಷಾ ವಿಷಯಕ್ಕೆ ಜೋಡಣೆ ಮಾಡಿಕೊಂಡು ಹೋದರೆ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಉಂಟಾಗಲಿದೆ. ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿಕೊಂಡು ಬಂದಿದ್ದೇನೆ. ಭಾಷಾ ವಿಷಯದಲ್ಲಿ ಮತಬ್ಯಾಂಕ್ ವಿಷಯ ಬರುವುದಿಲ್ಲ . ರಾಜ್ಯದ ಗಡಿಭಾಗದ ಪ್ರದೇಶಗಳಲ್ಲಿ ಗಡಿ ವಿಷಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಭಾಷಾ ಸಮಸ್ಯೆ ಪರಿಹರಿಸಲು ಮುಂದಾಗದೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಭಾಷಾ, ಗಡಿ ವಿಷಗಳ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಹಿಂದೇಟು ಹಾಕಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net