

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮುಂಗಾರು ಬಿತ್ತನೆ ಬೀಜದ ದರ ಏರಿಕೆ, ಬರ ಪರಿಹಾರ ವಿತರಣೆ ಧೋರಣೆ ಖಂಡಿಸಿ ನಗರದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ಬಿಜೆಪಿ ರೈತ ಮೋರ್ಚಾ ಗ್ರಾಮೀಣ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಕೃಷಿ ಜಂಟಿ ನಿರ್ದೇಶಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕಳೆದ ವರ್ಷ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ತೀವ್ರ ಬರದಿಂದಾಗಿ ರೈತರು ಆದಾಯ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಬಿತ್ತನೆ ಬೀಜ, ರಸಗೊಬ್ಬರ ಉಚಿತವಾಗಿ ನೀಡಿ ಪ್ರೋತ್ಸಾಹಿಸುವ ಬದಲಾಗಿದೆ ಬಿತ್ತನೆ ಬೀಜದ ದರವು ಶೇ.60 ರಿಂದ 70ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಬಿತ್ತನೆಗೆ ಸಜ್ಜಾಗಿರುವ ಬಡ, ಸಣ್ಣ ಗಾತ್ರದ ರೈತರಿಗೆ ಬೀಜ ಖರೀದಿಸಲು ಸಾಧ್ಯವಾಗುತ್ತಿಲ್ಲ. ಬಿತ್ತನೆ ಬೀಜ, ರಸಗೊಬ್ಬರ ದರಗಳ ಏರಿಕೆಯಿಂದಾಗಿ ರೈತರು ಕೃಷಿ ಚಟುವಟಿಕೆಗಳಿಗಾಗಿ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ತೊಗರಿ, ಹೆಸರು ಮತ್ತು ಜೋಳ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ. ಹೆಸರು (5ಕೆಜಿ) ಕಳೆದ ವರ್ಷ 501 ಇತ್ತು. ಈವರ್ಷ 785 ರೂ. ಆಗಿದೆ. ತೋಗರಿ 5ಕೆಜಿಗೆ 770 ರೂ. ಸೇರಿ ಹೀಗೆ ವಿವಿಧ ಬೆಳೆಗಳ ಬಿತ್ತನೆ ಬೀಜದ ದರದ 250 ರಿಂದ 300 ರೂ. ವರೆಗೆ ಏರಿಕೆ ಕಂಡಿದೆ. ಕೂಡಲೇ ರೈತರಿಗೆ ಸಬ್ಸಿಡಿ ಬೀಜದ ದರವನ್ನು ಇಳಿಕೆ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ರೈತರಿಗೆ ಬರ ಪರಿಹಾರ ವಿತರಣೆ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಪರಿಣಾಮ ಶೇ.45ರಷ್ಟು ರೈತರಿಗೆ ಪರಿಹಾರ ಸಿಕ್ಕಿಲ್ಲ. ಕೆಲ ಭಾಗದಲ್ಲಿ ರೈತರ ಕೃಷಿ ಜಮೀನಿಗಳಲ್ಲಿನ ಬೆಳೆಗಳ ಕುರಿತು ತಪ್ಪು ಮಾಹಿತಿ ಉಲ್ಲೇಖಿಸಿರುವುದರಿಂದ ಶೇ.100ರಷ್ಟು ಪರಿಹಾರವೇ ವಿತರಣೆ ಆಗಿಲ್ಲ.ಬರ ಪರಿಹಾರ ಎಂದು ಸರ್ಕಾರ ಘೋಷಣೆ ಮಾಡಿದರೆ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದಸರು.
ಬಿಜೆಪಿ ಬೆಳಗಾವಿ ಗ್ರಾಮಂತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಗದೀಶ ಬೂದಿಹಾಳ, ಮಹಾನಗರ ಅಧ್ಯಕ್ಷ ಕಲ್ಲಪ್ಪ.ಶಹಪೂರಕರ, ಚಂದ್ರಶೇಖರಯ್ಯ ಹಿರೇಮಠ, ಸುನಿಲ್ ವೀರೇಶನವರ, ಸಚಿನ ಕಡಿ, ಸಂತೋಷ ಹಡಪದ, ಮಂಜುನಾಥ ಮರಶೆಟ್ಟಿ, ಬಸವರಾಜ ಅರಳಿಕಟ್ಟಿ ಇತರರಿದ್ದರು.