

ಮೈಸೂರು: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ನಗರದಲ್ಲಿ ವಿವೇಕ ನಡಿಗೆ-ವಾಕಥಾನ್ ನಡೆಯಿತು.
ರಾಮಸ್ವಾಮಿ ವೃತ್ತದಿಂದ ಆರಂಭವಾದ ನಡಿಗೆ, ಚಾಮರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ರಸ್ತೆ, ಡಿ. ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ ಮೂಲಕ ಸಾಗಿ ಬಿಜೆಪಿ ಕಚೇರಿ ಬಳಿ ಮುಕ್ತಾಯಗೊಂಡಿತು. ನೂರಾರು ಯುವಜನರು ಶ್ವೇತವರ್ಣದ ಟಿ ಶರ್ಟ್ ಧರಿಸಿ ವಿವೇಕಾನಂದ ಅವರಿಗೆ ಜೈಕಾರ ಹಾಕುತ್ತಾ ಸಾಗಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಧೀರಜ್ ಮುನಿರಾಜು, ಟಿ.ಎಸ್. ಶ್ರೀವತ್ಸ, ಶಾಸಕರೂ ಆದ ಯುವಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಬಿಜೆಪಿ ಪ್ರಮುಖರಾದ ಕವೀಶ್‌ಗೌಡ, ಜೋಗಿ ಮಂಜು ಹಾಗೂ ಇತರರು ಪಾಲ್ಗೊಂಡಿದ್ದರು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಿವೇಕಾನಂದರು ಅನುಸರಿಸಿದ ಮಾರ್ಗ ಯುವ ಜನತೆಗೆ ದಾರಿ ದೀಪವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕಲ್ಪನೆಯೂ ವಿವೇಕಾನಂದರ ಕನಸೂ ಆಗಿದೆ. ಅಂತೆಯೆ ಭಾರತೀಯ ಪರಂಪರೆ ಆಧಾರದ ಮೇಲೆ ಶ್ರೇಷ್ಠ ಭಾರತ ನಿರ್ಮಾಣವಾಗಬೇಕಿದೆ ಎಂದರು.
ಮಾಜಿ ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಯುವ ದಿನದ ಅಂಗವಾಗಿ ಹೊಸ ದಿಲ್ಲಿಯಲ್ಲಿ ನಡೆಯುತ್ತಿರುವ ಯುವ ಮುಖಂಡರ ಭಾಷಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ದೇಶದ ನಾನಾ ಭಾಗಗಳ 30 ಲಕ್ಷ ಜನರಲ್ಲಿ ಮೆರಿಟ್ ಆಧಾರದಲ್ಲಿ ಆಯ್ಕೆಯಾದ 3000 ಮುಖಂಡರು ಭಾಗವಹಿಸಿದ್ದಾರೆ. ನಾಯಕತ್ವ ಹಾಗೂ ಭವಿಷ್ಯದ ಅತ್ಯುತ್ತಮ ಭಾಷಣಕಾರರನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ತನ್ಮೂಲಕ ಕಳೆದ 25 ವರ್ಷಗಳಿಂದ ನಡೆದುಕೊಂಡು ಬಂದಿರುವ ಯುವ ದಿನದ ಕಾರ್ಯಕ್ರಮ ಹೊಸ ಸ್ವರೂಪದಲ್ಲಿ ಆಚರಣೆಗೊಳ್ಳುತ್ತಿದೆ ಎಂದರು.