BJP ಯಿಂದ ಫೆ. 15 ರವರೆಗೆ ಅಟಲ್‌ ಸ್ಮೃತಿ ಸಂಕಲನ ಮತ್ತು ಪ್ರಚಾರ ಕಾರ್ಯಕ್ರಮ

BJP
Published on

ಕಾರವಾರ: ದೇಶ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಇಡೀ ವರ್ಷ ಆಚರಿಸಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ (BJP) ರಾಜ್ಯ ಕಾರ್ಯಕಾರಣಿ ಸದಸ್ಯ, ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತ ಶತ್ರು ಎಂದು ಹೆಸರಾದವರು. ಅವರು ಇಂದಿನ ತಲೆಮಾರಿನ ಯುವಕರಿಗೆ ಮಾದರಿ, ಅವರ ಆದರ್ಶಗಳನ್ನು ಸಾರುವ ಕಾರ್ಯವನ್ನು ಇಡೀ ವರ್ಷ ಒಂದು ಅಭಿಯಾನದಂತೆ ಜಿಲ್ಲೆಯಲ್ಲೂ ಮಾಡಲು ಬಿಜೆಪಿ ತೀರ್ಮಾನಿಸಿದೆ.

ಅದಕ್ಕಾಗಿ ರಾಜ್ಯದಲ್ಲಿ ಎ.ಎಚ್.ಶಿವಯೋಗಿ ಸ್ವಾಮಿ ಅವರ ನೇತೃತ್ವದಲ್ಲಿ 12 ಜನರ ಸಮಿತಿ ಮಾಡಲಾಗಿದೆ. ಜಿಲ್ಲಾ ಸಂಚಾಲಕನಾಗಿ ನಾನು, ಸಹ ಸಂಚಾಲಕ ರಾಜೇಶ ಭಂಡಾರಿ ನಾವು ಅಭಿಯಾನ ಆರಂಭಿಸಿದ್ದೇವೆ ಎಂದರು.

ಜನವರಿ 14 ರಿಂದ ಫೆಬ್ರವರಿ 15 ರವರೆಗೆ ಅಟಲ್ ಸ್ಮೃತಿ ಸಂಕಲನ ಮತ್ತು ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಅಟಲ್ ಅವರ ಜತೆ ಜಿಲ್ಲೆಯ ಒಡನಾಡಿಗಳನ್ನು ಗುರುತಿಸಿ, ಸನ್ಮಾನಿಸಲಾಗುವುದು. ಅವರ ವಿಚಾರಗಳನ್ನು, ಕ್ರೋಢೀಕರಿಸಲಿದ್ದೇವೆ.

ಆಗಿನ ಲೇಖನ, ಫೋಟೋಗಳನ್ನು ಸಂಗ್ರಹಿಸಿ ಪಿಪಿಟಿ ಮಾಡಿ ಪ್ರದರ್ಶನ ಮಾಡಲಿದ್ದೇವೆ. ಎರಡನೇ ಹಂತದಲ್ಲಿ ಅಟಲ್ ವಿರಾಸತ್ ಸಮ್ಮೇಳನ ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು.

BJP ಕಟ್ಟಿ ಬೆಳೆಸಿದವರು ವಾಜಪೇಯಿ

ಜನಸಂಘದ ನಂತರ ಬಿಜೆಪಿಯನ್ನು(BJP) ಕಟ್ಟಿ, ಬೆಳೆಸಿಕೊಂಡು ಬಂದವರು ಅಟಲ್ ಬಿಹಾರಿ ವಾಜಪೇಯಿ ಅವರು. ತುರ್ತು ಪರಿಸ್ಥಿತಿ ತಂದಿಟ್ಟ ಇಂದಿರಾ ಗಾಂಧಿ ಅವರ ಸರ್ಕಾರವನ್ನು ಕೆಳಗಿಳಿಸುವಲ್ಲಿ ಡಾ.ಜಯಪ್ರಕಾಶ ನಾರಾಯಣ ಅವರ ಜತೆ ವಾಜಪೇಯಿ ಅವರೂ ಪ್ರಮುಖ ಪಾತ್ರ ವಹಿಸಿದ್ದರು.

ವಾಜಪೇಯಿ ಅವರ ವ್ಯಕ್ತಿತ್ವವನ್ನು ಸ್ವತಃ ನೆಹರೂ ಅವರೂ ಶ್ಲಾಘಿಸಿದ್ದರು. 1957 ರಲ್ಲಿ ಜನಸಂಘದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು ಕವಿ, ಲೇಖಕ, ಪತ್ರಕರ್ತ, ಉತ್ತಮ ವಾಗ್ಮಿ ಮಾತ್ರವಲ್ಲ ಸಂಸದೀಯ ಪಟುವೂ ಆಗಿದ್ದರು.

ದೇಶ ಮೊದಲು ಎಂಬ ಬಿಜೆಪಿಯ ನಿಲುವನ್ನು ಅಕ್ಷರಶಃ ಎತ್ತಿ ಹಿಡಿದರು. ಅವರ ಪ್ರತಿಭೆಯನ್ನು ಮೆಚ್ಚಿ ವಿದೇಶಾಂಗ ಸಮಿತಿಯಲ್ಲಿ ಅವರಿದ್ದರು.

ವಾಜಪೇಯಿ ಅವರು ಜಿಲ್ಲೆಗೂ ಎರಡು ಬಾರಿ ಭೇಟಿ ಕೊಟ್ಟಿದ್ದರು. ಅವರ ಅಸ್ತಿಯನ್ನು ಜಿಲ್ಲೆಯ ನದಿಯಲ್ಲಿ ವಿಸರ್ಜನೆ ಮಾಡಲಾಗಿತ್ತು. ಹಾಗಾಗಿ ಜಿಲ್ಲೆಯಲ್ಲಿ ಅವರ ಜನ್ಮ ಶತಮಾನೋತ್ಸವಕ್ಕೆ ಹೆಚ್ಚು ಮಹತ್ವವಿದೆ ಎಂದರು. BJP ಪಕ್ಷದ ಮುಖಂಡರಾದ ರಾಜೇಶ ಭಂಡಾರಿ, ರವಿರಾಜ ಅಂಕೋಲೆಕರ್, ನಾಗೇಶ ಕುರ್ಡೇಕರ್, ಕಿಶನ್ ಕಾಂಬಳೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net