ಕಾಂಗ್ರೆಸ್‌ಗೆ ಸೋಲಿನ ಭಯ ಶುರುವಾಗಿದೆ; ಶ್ರೀರಾಮುಲು

Sriramulu
Published on

ಹಾವೇರಿ: ಕಾಂಗ್ರೆಸ್‌ನವರು ಮೂರು ಬಿಟ್ಟವರು. ನಮ್ಮ ಪಕ್ಷದ ಶಾಸಕರಿಗೆ ಫೋನ್ ಕರೆ ಮಾಡಿ ಅವರ ಪಕ್ಷಕ್ಕೆ ಕರೆಯುತ್ತಾರೆ. ಅವರ ಈ ನಡೆ ಗಮನಿಸಿದರೆ ಬಹುಶಃ ಅವರು ಸೋಲನ್ನು ಒಪ್ಪಿಕೊಂಡಂತಾಗಿದೆ. ಅವರಿಗೆ ಸೋಲಿನ ಭಯ ಶುರುವಾಗಿದೆ. ಎಲ್ಲೋ ಒಂದು ಕಡೆ ಜನ ಮರುಳಾಗುತ್ತಾರೆ ಎಂಬ ಆಸೆಯಿಂದ ಹೀಗೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಕೈಪಡೆ ವಿರುದ್ಧ್ಧ ಆರೋಪಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಮುಖಂಡರ ಗೌಪ್ಯ ಮತದಾನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಅಜೆಂಡಾ ಇಲ್ಲದಂಥ ಪಕ್ಷ. ಕಾಂಗ್ರೆಸ್ ದಿವಾಳಿಯಾಗುತ್ತದೆ. ಮೀಸಲಾತಿ ವಿಚಾರ ಕಾಂಗ್ರೆಸ್ ನಿದ್ದೆಗಡಿಸಿದೆ. ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯನವರು ಏನೇ ಸರ್ಕಸ್ ಮಾಡಿದರೂ ಗೆಲುವು ಬಿಜೆಪಿಯದಾಗುತ್ತದೆ. ನಮ್ಮ ಪಕ್ಷ 140 ಸೀಟು ಗೆಲ್ಲುತ್ತದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ, ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಮಾರಿಹಬ್ಬ ಶುರುವಾಗುತ್ತದೆ. ಕೆಲವೇ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಪಕ್ಷದ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡುವ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿದೆ ಎಂದರು.
ಸಿದ್ದರಾಮಯ್ಯ ಅಂದೇ ಸೋಲುತ್ತಿದ್ದರು
ಬಾದಾಮಿಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದಿದ್ದರೆ ಸಿದ್ದರಾಮಯ್ಯ 2018ರಲ್ಲೇ ಸೋಲುತ್ತಿದ್ದರು. ಇವತ್ತು ದೇವೇಗೌಡರನ್ನು ಅವರು ನೆನಪು ಮಾಡಿಕೊಳ್ಳಬೇಕು. ಸದಾ ಕಾಲ ಸ್ಮರಿಸಬೇಕು. ಬೇವಿನಮರದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಅವರು ಪಡೆದ 22 ಸಾವಿರ ಮತ ಬಿಜೆಪಿ ಪಕ್ಷದ್ದು. ಅವರು ಅಷ್ಟು ಮತ ಪಡೆಯದಿದ್ದರೆ ರಾಮುಲು ಬಾದಾಮಿಯಲ್ಲಿ ಗೆಲ್ಲುತ್ತಿದ್ದರು. ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂದು ನಾವೂ ಹೊಂದಾಣಿಕೆ ಮಾಡಿಕೊಂಡಿದ್ದರೆ ಅವತ್ತೇ ಮುಗಿದು ಹೋಗುತ್ತಿತ್ತು. ಅಂತಹ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಶ್ರೀರಾಮುಲು ಹೇಳಿದರು.
ಬೊಮ್ಮಾಯಿ ಒಂದೇ ಕಡೆ ಸ್ಪರ್ಧೆ
ಸಿಎಂ ಬೊಮ್ಮಾಯಿ ಅವರು ಎರಡು ಕಡೆ ಸ್ಪರ್ದೆ ಮಾಡಲ್ಲ. ಈ ವಿಚಾರ ಪಕ್ಷದಲ್ಲಿ ಚರ್ಚೆಯಾಗಿಲ್ಲ. ಶಿಗ್ಗಾಂವಿಯಿಂದಲೇ ಅವರು ಸ್ಪರ್ಧಿಸುತ್ತಾರೆ. 56 ಇಂಚಿನ ಚಾತಿ ಇರುವ ವ್ಯಕ್ತಿ ನಮ್ಮ ಬೊಮ್ಮಾಯಿಯವರು. ಎಲ್ಲ ಆಶಯಗಳನ್ನು ಈಡೇರಿಸುವ ಕೆಲಸ ಮಾಡಿದ್ದಾರೆ ಎಂದು ಶ್ರೀರಾಮುಲು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net