ರಾಹುಲ್ ಗಾಂಧಿ ಹೇಳಿಕೆ ತಿರುಚಿದೆ ಬಿಜೆಪಿ

nrp hari
Published on

ಎನ್.ಆರ್.ಪುರ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ತಿರುಚಿ ಅಪಪ್ರಚಾರ ಮಾಡಿ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವ ಯತ್ನ ಮಾಡುತ್ತಿದೆ. ಬಿಜೆಪಿ ಐಟಿ ಸೆಲ್ ಕೆಲಸವೇ ರಾಹುಲ್ ಗಾಂಧಿ ವಿರುದ್ಧ ಹೇಳಿಕೆಗಳನ್ನು ಪ್ರಚಾರ ಮಾಡುವುದಾಗಿ ಎಂದು ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.

ದೇಶದಲ್ಲಿ ಸಮಾನತೆ ಸಾಧಿಸಿದ ನಂತರ ಮೀಸಲಾತಿ ರದ್ದುಪಡಿಸಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಮೀಸಲಾತಿಯನ್ನೇ ರದ್ದುಗೊಳಿಸುವುದಾಗಿ ಹೇಳಿದ್ದಾರೆ ಎಂದು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ ಮೀಸಲಾತಿ ಪರಿಷ್ಕರಣೆ ಮಾಡಬೇಕು ಎಂದು ಪ್ರಸ್ತಾಪ ಮಾಡಿದ್ದರು. ಆರ್‌ಎಸ್‌ಎಸ್‌ನವರು 1947 ಆಗಸ್ಟ್‌ನಲ್ಲಿ ತ್ರಿವರ್ಣ ಧ್ವಜ ಅಶುಭ ಎಂದು ಹೇಳಿ ಅವರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲಿಲ್ಲ. ಇಂಥವರಿಂದ ಕಾಂಗ್ರೆಸ್ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಶನಿವಾರ ಸುದ್ದಿಗಾರರರಿಗೆ ತಿಳಿಸಿದರು.
ಜವಾಹರಲಾಲ್ ನೆಹರು ಆರ್ಟಿಕಲ್ 14, 16 ತಿದ್ದುಪಡಿ ತಂದು ಸಮಾನ ಅವಕಾಶ, ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ಒದಗಿಸಿದ್ದರು. ಶಿಕ್ಷಣದಲ್ಲೂ ಮೀಸಲಾತಿ ತಂದಿದ್ದರು. ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷರಾದ ಅವಧಿಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಲಾಯಿತು. ರಾಜ್ಯಸಭೆಯಲ್ಲೂ ಮಸೂದೆ ಪಾಸಾಗಿತ್ತು ಎಂದು ಹೇಳಿದರು.
ಬಿಜೆಪಿಯಲ್ಲಿದ್ದ ರಾಮಜೋಯಿಸ್ ಎಂಬುವರು ಮೀಸಲಾತಿ ಕಡಿಮೆ ಮಾಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್, ಸುದರ್ಶನ್ ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ್ದರು. ಬಿಜೆಪಿ ಅನೇಕ ನಾಯಕರು ಸಂವಿಧಾನ ಬದಲಾಯಿಸುವ ಮಾತನಾಡಿದ್ದಾರೆ. ದಲಿತರು, ಹಿಂದುಳಿದವರ ವಿರುದ್ಧ ಬಿಜೆಪಿ ಮಾಡಿದ ಅನೇಕ ಹುನ್ನಾರಗಳ ನಿದರ್ಶನಗಳು ಇವೆ. ಇವನ್ನೆಲ್ಲ ಮುಚ್ಚಿಟ್ಟುಕೊಂಡು ಕಾಂಗ್ರೆಸ್ ದಲಿತ ವಿರೋಧಿ ಎಂದು ಬಿಂಬಿಸಲು ಹೊರಟಿದೆ. ಬಿಜೆಪಿ ಆಂತರ್ಯದಲ್ಲಿ ಸಂವಿಧಾನದ ವಿರುದ್ಧವಾಗಿದ್ದು, ಜನರೆದುರು ನಾಟಕವಾಡುತ್ತಿದೆ ಎಂದು ಹರಿಹಾಯ್ದರು. ಡಾ. ಕೆ.ಪಿ.ಅಂಶುಮಂತ್, ಪಿ.ಆರ್.ಸದಾಶಿವ, ಶಿವಣ್ಣ, ವಾಸುದೇವ ಕೋಟ್ಯಾನ್, ಗಾಂಧಿ ಗ್ರಾಮ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net