ರಾಜ್ಯದಲ್ಲಿ ಬಿಜೆಪಿ ಶುದ್ಧೀಕರಣ ಆಗಬೇಕಿದೆ; ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

Eshwarappa PC 1
ಕೆ.ಎಸ್.ಈಶ್ವರಪ್ಪ
Published on

ವಿಜಯಪುರ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದೇ ಒಂದು ಸ್ಥಾನವೂ ಪಡೆಯದ ಬಿಜೆಪಿ ಇಂದು ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಅನೇಕ ಹಿರಿಯರ ಪರಿಶ್ರಮವೇ ಕಾರಣ. ರಕ್ತವನ್ನು ಬೆವರಿನಂತೆ ಹರಿಸಿ ಪಕ್ಷ ಕಟ್ಟಿದ್ದಾರೆ. ಅಂಥ ಬಿಜೆಪಿ ಇಂದು ರಾಜ್ಯದಲ್ಲಿ ಕೆಲವೇ ಕೆಲವರ ಹಿತಾಸಕ್ತಿಗೆ ಬಲಿಯಾಗುತ್ತಿದ್ದು, ಪಕ್ಷ ಶುದ್ಧೀಕರಣವಾಗಬೇಕೆಂಬುದು ಹಲವರ ಮನದಿಂಗಿತವಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಹಿರಿಯರೆಂಬ ಕಾರಣಕ್ಕೆ ಅನೇಕರನ್ನು ಪಕ್ಷದಿಂದ ದೂರವಿಡಲಾಯಿತು. ಟಿಕೆಟ್ ವಂಚಿತರಾದರು. ಆದರೆ, ಈ ನಿಯಮ ಕೆಲವರಿಗೆ ಮಾತ್ರ ಅನ್ವಯಿಸಿತು. ಹಿರಿತನದ ಮಾನದಂಡದ ಮೇಲೆ ಬೇಡವಾದವರನ್ನು ದೂರವಿರಿಸಲಾಯಿತು. ಕೆಲವರಿಗೆ ಟಿಕೆಟ್ ನೀಡಲಾಯಿತು. ಅದರಲ್ಲಿ ನಾನು ಸಹ ಒಬ್ಬ. ಜಗದೀಶ ಶೆಟ್ಟರ್ ಅವರು ಸಹ ಹೊರ ಹೋಗಿದ್ದು, ಇದೇ ಕಾರಣಕ್ಕೆ. ಬಳಿಕ ಅವಕಾಶ ಸಿಕ್ಕಿತು. ಹೀಗಾಗಿ ಪಕ್ಷದಲ್ಲಿ ಕೆಲವು ತೊಂದರೆಗಳಿವೆ. ಇದೀಗ ನಾನು ಹೊರ ಬಂದಿದ್ದು, ಭವಿಷ್ಯದಲ್ಲಿ ಮತ್ತೆ ಬಿಜೆಪಿ ಸೇರ್ಪಡೆಯಾಗುವ ಯಾವುದೇ ಉದ್ಧೇಶ ಸದ್ಯಕ್ಕಂತೂ ಇಲ್ಲ. ಹಿಂದುತ್ವದ ರಕ್ಷಣೆಗಾಗಿ ಬ್ರಿಗೆಡ್ ಬೆಳೆಸುವುದೊಂದೇ ಸದ್ಯದ ಗುರಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಹೊಸ ಬ್ರಿಗೇಡ್ ಸ್ಥಾಪನೆ

ರಾಜ್ಯದಲ್ಲಿ ನಾವು ಅಪೇಕ್ಷೆ ಪಟ್ಟಂತೆ ಹಿಂದುತ್ವ ಇಲ್ಲ. ಸಾಕಷ್ಟು ಜನರಿಗೆ ಈ ಬಗ್ಗೆ ನೋವಿದೆ. ಹಿಂದುತ್ವದಿಂದಲೇ ಮೇಲೆ ಬಂದಿದ್ದೇನೆ. ಹೀಗಾಗಿ ಬ್ರಿಗೇಡ್ ಮಾಡಿ ಆ ಮೂಲಕ ಹಿಂದುತ್ವದ ಋಣ ತೀರಿಸಲು ಮುಂದಾಗಿದ್ದೇನೆ ಎಂದ ಈಶ್ವರಪ್ಪ, ಈ ಹಿಂದೆ ಕೂಡಲ ಸಂಗಮ ಸ್ವಾಮೀಜಿ ಅವರು ಹಿಂದುತ್ವದ ರಕ್ಷಣೆಗಾಗಿ ಬ್ರಿಗೇಡ್ ಸ್ಥಾಪಿಸಿ ಎಂದಿದ್ದರು. ಬಸನಗೌಡ ಪಾಟೀಲ ಯತ್ನಾಳರಲ್ಲಿ ರಾಣಿ ಚನ್ನಮ್ಮ ರಕ್ತ ಹರಿಯುತ್ತಿದ್ದು, ಈಶ್ವರಪ್ಪ ಅವರಲ್ಲಿ ರಾಯಣ್ಣನವರ ರಕ್ತ ಹರಿಯುತ್ತಿದೆ. ಈ ಇಬ್ಬರ ಕೈಗೆ ಖಡ್ಗ ಕೊಟ್ಟಿದ್ದು, ಹಿಂದುತ್ವದ ರಕ್ಷಣೆಗಾಗಿ ಹೋರಾಡಿ ಎಂದಿದ್ದರು. ಆ ನಿಟ್ಟಿನಲ್ಲಿ ನೂರಾರು ಸಂತರು ಸೇರಿ ಪ್ರೋತ್ಸಾಹ ನೀಡಿದ ಫಲ ಇದೀಗ ಸಭೆ ಕರೆಯಲಾಗಿದೆ. ರಾಜ್ಯದ ಎರಡು ಸಾವಿರಕ್ಕೂ ಅಧಿಕ ಪ್ರಮುಖರು ಬಾಗಲಕೋಟೆಯಲ್ಲಿ ಸಭೆ ಸೇರುತ್ತಿದ್ದು, ಬ್ರಿಗೇಡ್‌ಗೆ ಯಾವ ಹೆಸರು ಇಡುವುದು ಎಂಬ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಶಾಸಕ ಯತ್ನಾಳ ಸಭೆಯಲ್ಲಿ ಪಾಲ್ಗೊಳ್ಳುವರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಯತ್ನಾಳ ಸಹ ಪಾಲ್ಗೊಳ್ಳಲಿದ್ದಾರೆ. ಅವರೇ ಇಂಥದ್ದೊಂದು ವಿಚಾರ ಕೊಟ್ಟಿದ್ದು. ಹೀಗಾಗಿ ಅವರು ಸಹ ಪಾಲ್ಗೊಳ್ಳುವರು. ಸಾಧು ಸಂತರೇ ಇದರ ನೇತೃತ್ವ ವಹಿಸಲಿದ್ದು, ಅವರ ಅಪೇಕ್ಷೆ ಮೇರೆಗೆ ಬ್ರಿಗೇಡ್ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net