ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ: ಬಿಜೆಪಿ ಬಿಡುಗಡೆ ಮಾಡಿದ ಅಂಕಪಟ್ಟಿಯಲ್ಲಿ ಏನಿದೆ ಗೊತ್ತಾ?

BJP has released the scorecard against the Congress government Mandya
Published on

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ವಿಭಾಗವಾರು ಗ್ರೇಡ್ ಇರುವ ಅಂಕಪಟ್ಟಿಯನ್ನು ಬಿಡುಗಡೆ ಮಾಡಿ ಶೂನ್ಯ ಸಾಧನೆ ಎಂದು ವಿಭಿನ್ನವಾಗಿ ವ್ಯಂಗ್ಯ ಪ್ರತಿಭಟನೆ ಮಾಡಲಾಯಿತು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಕಪಟ್ಟಿ ಬಿಡುಗಡೆ ಮಾಡಿ ಉದ್ಯೋಗ ಸೃಷ್ಟಿ ಪರೀಕ್ಷೆಯಲ್ಲಿ ‘ಡಿ’ ಗ್ರೇಡ್, ರಕ್ಷಣಾ ಪರೀಕ್ಷೆಯಲ್ಲಿ ‘ಸಿ’ ಗ್ರೇಡ್, ಆರೋಗ್ಯ ಪರೀಕ್ಷೆಯಲ್ಲಿ ‘ಸಿ’ ಗ್ರೇಡ್, ಆರ್ಥಿಕ ಪರೀಕ್ಷೆಯಲ್ಲಿ ‘ಎಫ್’ ಗ್ರೇಡ್, ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ ‘ಸಿ’ ಗ್ರೇಡ್, ಸ್ಟೋರಿ ಟೆಲ್ಲಿಂಗ್‌ನಲ್ಲಿ ‘ಎ + +’ ಹಾಗೂ ಫೈನಲ್ ಗ್ರೇಡ್ ‘ಡಿ’ ಎಂದು ವ್ಯಂಗ್ಯವಾಡಲಾಯಿತು.
ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದ ಪರೀಕ್ಷೆಯಲ್ಲಿ ಸಂಪೂರ್ಣ ಫೇಲ್ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿ ನಿಂತ ನೀರಾಗಿರುವ ಕಾಂಗ್ರೆಸ್ ಸರ್ಕಾರ, ನಾಡಿನ ರೈತರು, ಶ್ರಮಿಕರು, ಮಹಿಳೆಯರು, ಯುವಕರು, ಉದ್ಯಮಿಗಳು, ಹಿಂದುಳಿದ ಸಮುದಾಯಗಳು ಸೇರಿದಂತೆ ವಿವಿಧ ವರ್ಗಗಳ ಹಿತಾಸಕ್ತಿಗಳನ್ನು ಕಡೆಗಣಿಸಿ ನಂಬಿ ಮತ ಹಾಕಿದ ಮತದಾರರ ಕಿವಿಗೆ ಹೂವಿಟ್ಟಿದೆ ಎಂದು ಟೀಕಿಸಿದರು.
ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ದಾಖಲೆಯ ಬರ ಪರಿಹಾರ ಸಿಕ್ಕಿದೆ. ಆದರೆ ಇನ್ನೂ 2 ಲಕ್ಷ ರೈತರಿಗೆ ಪರಿಹಾರ ನೀಡಬೇಕಿದೆ. ಕೆಲವರಿಗೆ 300, 400 ರೂ ಪರಿಹಾರ ನೀಡಿದ್ದಾರೆ. ಬಿತ್ತನೆ ಮಾಡಬೇಡಿ ಎಂದು ಮೊದಲೆ ಹೇಳಿ, ಈಗ ಬಿತ್ತನೆ ಮಾಡದವರಿಗೆ ಪರಿಹಾರ ನೀಡುತ್ತಿಲ್ಲ. ಇತ್ತ ಬೆಳೆಯು ಇಲ್ಲ ಅತ್ತ ಪರಿಹಾರವು ಇಲ್ಲ ಎಂಬಂತೆ ರೈತರ ಹೊಟ್ಟೆಯ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಂಪ್ಪೂರ್ಣ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ನೇಹಾ, ಅಂಜಲಿ ಕೊಲೆಯಾದರು. ಇನ್ನು ಯಾವ ಹೆಣ್ಣು ಮಕ್ಕಳು ಕೊಲೆಯಾಗುತ್ತಾರೆ ಎಂಬ ಆತಂಕವಿದೆ. ಸರ್ಕಾರ ಎಷ್ಟು ಉಚಿತ ನೀಡಿದರೂ ಬದುಕುವ ಗ್ಯಾರಂಟಿಯೇ ಇಲ್ಲ. ಸರ್ಕಾರ ಬಂದ ನಂತರ ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಹೇಳಲು ಅನುಮತಿ ಸಿಕ್ಕಿದೆ. ಹನುಮಾನ್ ಚಾಲೀಸ ಕೇಳಿದರೆ, ಜೈ ಶ್ರೆರಾಮ್ ಎಂದರೆ ಹಲ್ಲೆಯಾಗುತ್ತಿದೆ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟಮಾಡುವ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ, ರಾಜ್ಯವನ್ನು ಕೊಲೆಗಡುಕರ ಸ್ವರ್ಗ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಹಾಲು ಉತ್ಪಾದಕರಿಗೆ ಬರಬೇಕಾದ ಪ್ರೋತ್ಸಾಹ ಧನ, ಸಾಮಾಜಿಕ ಭದ್ರತಾ ಪಿಂಚಣಿ ಹಣ, ವಿಧವೆಯರ ಮಾಶಾಸನ, ದಲಿತರಿಗೆ ಮೀಸಲಿಟ್ಟ ಹಣ, ಗ್ಯಾರಂಟಿ ಯೋಜನೆಗಳಿಗೆ ಹೊಂದಿಸಲಾಗುತ್ತಿದೆ. ಹೊಸ ನೀರಾವರಿ ಯೋಜನೆಗಳಿಗೆ ಹಣವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗವಿಲ್ಲದಂತಹ ಸಂಕಷ್ಟ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದೊಡ್ಡಿದೆ ಎಂದು ಟೀಕಿಸಿದರು.
ಬಿಜೆಪಿ ಮುಖಂಡರಾದ ವಿನೋಭ, ಪ್ರಸನ್ನಕುಮಾರ್, ಬಿ.ಟಿ.ಶಿವಲಿಂಗಯ್ಯ, ನಾಗಾನಂದ್, ಸುರೇಶ್, ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net