

ಹುಬ್ಬಳ್ಳಿ: ಕಾಂಗ್ರೆಸ್ ಭ್ರಷ್ಟಾಚಾರದ ರಕ್ತ ಬೀಜಾಸುರ ಇದ್ದಂತೆ. ಇಂಥವರು ನಮಗೇನು ಹೇಳುತ್ತಾರೆ? ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲವನ್ನೂ ತನಿಖೆ ಮಾಡಲಿ. ನೇರವಾಗಿ ಎಫ್ಐಆರ್ ದಾಖಲು ಮಾಡಲಿ. ನಮ್ಮ ತಕರಾರಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖಾ ಆಯೋಗ ರಚಿಸಿ ಅದಕ್ಕೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡುತ್ತಾರೆ. ಅವರು ದಿನವೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಯ್ಯುತ್ತಿರುತ್ತಾರೆ ಎಂದರು.
ಜವಾಹರಲಾಲ್ ನೆಹರು ಕಾಲದಿಂದ ಹಿಡಿದು ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್ನವರು. ಇದನ್ನು ನಾವು ಹೇಳುತ್ತಿಲ್ಲ. ನಿಮ್ಮ (ಕಾಂಗ್ರೆಸ್) ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ ಎನ್ನುತ್ತಿದ್ದಾರೆ ಬಸವರಾಜ ರಾಯರಡ್ಡಿ. ಇದನ್ನೆಲ್ಲ ಮೊದಲು ನೋಡಿಕೊಳ್ಳಿ ಎಂದು ಕುಟುಕಿದರು.
ಯುಪಿಎ ಎಂದು ಹೆಸರಿಟ್ಟುಕೊಂಡಿದ್ದ ಕಾಂಗ್ರೆಸ್ ಸೇರಿ ವಿವಿಧ ಪಕ್ಷದ ನಾಯಕರು, ಇಂಡಿಯಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಯುಪಿಎ ಕಾಲದಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರವಾಗಿದೆ. ಯುಪಿಎ ಎಂದರೆ ಜನರು ಛೀ-ಥೂ ಎನುತ್ತಾರೆಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರೇ ನಿಮ್ಮದೇ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜಾಮೀನು ಮೇಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಯಾರು ನಿಂತರೇನು?:
ರಾಜ್ಯದಲ್ಲಿ ನಮ್ಮ ಪಕ್ಷದಿಂದ 22ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ನನ್ನ ವಿರುದ್ಧ ಯಾರು ಸ್ಪರ್ಧಿಸುತ್ತಾರೆಂದು ನನಗೆ ಗೊತ್ತಿಲ್ಲ. ಯಾರಾದರೊಬ್ಬರು ಸ್ಪರ್ಧಿಸುತ್ತಾರೆ. ಇದಕ್ಕೆ ನಾನು ಉತ್ತರಿಸುವುದಿಲ್ಲ ಎಂದರು.