

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರನ್ನು ತಮ್ಮ ಮನೆಗೆ ಊಟಕ್ಕೆ ಕರೆದರೆ ದೊಡ್ಡ ವಿಷಯ ಎಂದು ಬಿಂಬಿಸಬೇಕಿಲ್ಲ. ಬಿಜೆಪಿಯವರದ್ದು ಮೊಸರಲ್ಲಿ ಕಲ್ಲು ಹುಡುಕುವ ಮನಸ್ಥಿತಿ. ಅದಕ್ಕೆ ವಿಶೇಷ ಮಹತ್ವ ಕೊಡುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರೆಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತದೆ. ಸಚಿವ ಸಂಪುಟ ಪುನರ್ ರಚನೆ, ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸೇರಿ ಇತರ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ನಿಮಗೂ ಮುಖ್ಯಮಂತ್ರಿ ಆಗುವ ಅಸೆ ಇದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಾಕಾಗಬಾರದು? ಎಂದು ಮರು ಪ್ರಶ್ನಿಸಿದರು.
ಒಳಮೀಸಲಾತಿ ಜಾರಿ ಸಂಬಂಧ ನೇಮಕಾತಿ ನಡೆದಿರಲಿಲ್ಲ. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆಗಳು ಖಾಲಿ ಇವೆ. ಸದ್ಯ 4,600 ಕಾನ್‌ಸ್ಟೇಬಲ್‌ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 545 ಪಿಎಸ್‌ಐಗಳ ನೇಮಕಾತಿ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಹೊಸದಾಗಿ 402 ಪಿಎಸ್‌ಐ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಜತೆಗೆ ಇನ್ನೂ 600 ಪಿಎಸ್‌ಐಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಒಳಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳಲ್ಲಿ ನೇಮಕಾತಿ ಆರಂಭಿಸಲಾಗುವುದು. ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದೆಂದು ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಮಾರ್ಗಸೂಚಿಯನ್ವಯ ಪಾರದರ್ಶಕವಾಗಿ ನೇಮಕಾತಿ ನಡೆಯಲಿದೆ. ಇನ್‌ಸ್ಪೆಕ್ಟರ್‌ಗಳನ್ನು ಎರಡು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡುವ ನಿಯಮ ಜಾರಿಗೆ ತರಲಾಗಿದೆ ಎಂದರು.