ದೇಶದಲ್ಲಿ 14 ಕೋಟಿ ಸದಸ್ಯರನ್ನು ಹೊಂದಿದ ಬಿಜೆಪಿ

ಹಾಲಪ್ಪ ಆಚಾರ್
ಹಾಲಪ್ಪ ಆಚಾರ್
Published on

ಯಲಬುರ್ಗಾ: ದೇಶಕ್ಕಾಗಿ ಸೇವೆ ಮತ್ತು ಜವಾಬ್ದಾರಿ ಅರಿತ ಬಿಜೆಪಿ ಕಾರ್ಯಕರ್ತರು ಅಧಿಕಾರದ ಆಸೆಗಾಗಿ ರಾಜಕೀಯ ಮಾಡುವುದಿಲ್ಲ. ಭಾರತದಲ್ಲಿ ಬಿಜೆಪಿ ಅತಿ ಹೆಚ್ಚು 14 ಕೋಟಿ ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರ ಪ್ರೀತಿ ಮತ್ತು ವಿಶ್ವಾಸದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದೆ. ಸುಳ್ಳು ಭರವಸೆ ನೀಡಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಭ್ರಷ್ಟಾಚಾರ ತಾಂಡವವಾಡುತ್ತಿದೆ. 25 ಸಾವಿರ ಕೋಟಿ ರೂ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಿಸಲಾತಿ ಹಣ ದುರುಪಯೋಗ ಪಡಿಸಿಕೊಂಡಿದೆ. ವಾಲ್ಮೀಕಿ ನಿಗಮದ 86 ಕೋಟಿ ರೂ. ಲೂಟಿ ಮಾಡಿ ಕೇಂದ್ರ ಚುನಾವಣೆಯಲ್ಲಿ ಖರ್ಚು ಮಾಡಿದೆ. ಯಾವ ಯೋಜನೆಗೂ ಅನುದಾನ ಬಿಡುಗಡೆ ಮಾಡಿಲ್ಲ. ನಾನು ನೀರಾವರಿ ಯೋಜನೆ ನಿರ್ಮಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲಾ. ಅದನ್ನು ಉಪಯೋಗಿಸಿ ಹಳ್ಳಿಗಳಲ್ಲಿ ಭಾಷಣ ಮಾಡುವುದನ್ನು ಬಿಡಬೇಕು. ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದ್ದು ನಮ್ಮ ಸರ್ಕಾರ ಎಂದು ಜನರಿಗೆ ಸತ್ಯ ತಿಳಿಸಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಯಶಸ್ವಿಯಾಗಿ ಮುಂದುವರಿದಿದೆ. ಪಕ್ಷ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನೇನು ಮಾಡಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಪ್ರತಿ ಗ್ರಾಮದಲ್ಲಿ ಕಾರ್ಯಕರ್ತರು 8 ಗಂಟೆ ಕೆಲಸ ಮಾಡಬೇಕು. ಶಾಲೆ, ಅಂಗನವಾಡಿ, ಕೆರೆಗಳ ಸ್ವಚ್ಛತೆ ಕಾರ್ಯ ಮಾಡಬೇಕು. ಕಾರ್ಯಕರ್ತರ ಮನೆ ಭೇಟಿ ಮಾಡಿ ಸಭೆ ನಡೆಸುವುದು. ಡಾ.ಬಿ.ಆರ್.ಅಂಬೇಡ್ಕರ್ ಪತ್ಥಳಿ ಹಾಗೂ ನಾಮಫಲಕ ಜಾಗ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಬೇಕು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ, ಪ್ರಮುಖರಾದ ನರಸಿಂಗರಾವ್ ಕುಲಕರ್ಣಿ, ಶಿವು ಅರಕೇರಿ, ಬಸವಲಿಂಗಪ್ಪ ಭೂತೆ, ಸಿ.ಎಚ್.ಪೊಲೀಸ್ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಪಕ್ಕೀರಪ್ಪ ತಳವಾರ, ಶಕುಂತಲಾ ಮಾಲಿಪಾಟೀಲ್, ಶಿವಶಂಕರ ದೇಸಾಯಿ, ಅಮರೇಶ ಹುಬ್ಬಳ್ಳಿ, ವಸಂತಕುಮಾರ ಭಾವಿಮನಿ, ಶಿವಪ್ಪ ವಾದಿ, ಶರಣಪ್ಪ ಗುಂಗಾಡಿ, ಸಿದ್ದು ಮಣ್ಣಿನವರ, ಲಕ್ಷ್ಮಣ ಕಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net