ಪೌರ ಕಾರ್ಮಿಕರನ್ನು ಕಾಯಂ ಮಾಡಿದ್ದು ಬಿಜೆಪಿ ಸರ್ಕಾರ: ಮಾಜಿ ಮೇಯರ್ ಶಿವಕುಮಾರ್ ಹೇಳಿಕೆ

28
Published on

ಮೈಸೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎರಡು ಹಂತದಲ್ಲಿ ಪೌರಕಾರ್ಮಿಕರನ್ನು ರಾಜ್ಯಾದ್ಯಂತ ಕಾಯಂ ಮಾಡುವ ಮೂಲಕ ನೆರವಾಗಿದ್ದರು ಎಂದು ಮಾಜಿ ಮೇಯರ್ ಶಿವಕುಮಾರ್ ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪೌರಕಾರ್ಮಿಕರನ್ನು ಕಾಯಂ ಮಾಡಲಿಲ್ಲ. ಆದರೆ ಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ ಮೊದಲ ಹಂತದಲ್ಲಿ 11,133 ಹಾಗೂ ಎರಡನೇ ಹಂತದಲ್ಲಿ 12,874 ಜನರನ್ನು ಕಾಯಂ ಮಾಡಲಾಯಿತು. ಇದನ್ನು ಎಲ್ಲರೂ ಸಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೌರ ಕಾರ್ಮಿಕರ ಹಿತರಕ್ಷಣೆಗಾಗಿ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ 568 ಕೋಟಿ ರೂ. ಮೀಸಲಿಟ್ಟಿದ್ದರು. ಇದರೊಂದಿಗೆ ವೇತನವಲ್ಲದೆ 2,000 ನೀಡುವ ಮೂಲಕ ಸಂಕಷ್ಟ ಭತ್ಯೆ ಎಂಬ ಯೋಜನೆಯನ್ನು ಜಾರಿಗೆ ತಂದರು. ಎಲ್ಲರಂತೆಯೇ ಪೌರ ಕಾರ್ಮಿಕರ ಮಕ್ಕಳು ವಿದ್ಯೆ ಪಡೆಯಬೇಕೆಂಬ ಅಭಿಲಾಷೆಯಿಂದ 1ರಿಂದ ಹತ್ತನೇ ತರಗತಿ ಮಕ್ಕಳಿಗೆ 3,100 ರೂ. ವಿದ್ಯಾರ್ಥಿ ವೇತನವನ್ನೂ ನೀಡಿದರು. ಆದರೆ ಇದೀಗ ಕಾಂಗ್ರೆಸ್ ಪೌರಕಾರ್ಮಿಕರ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.

45 ವರ್ಷಕ್ಕಿದ್ದ ನಿವೃತ್ತಿ ವಯೋಮಿತಿಯನ್ನು 55 ವರ್ಷಕ್ಕೆ ಏರಿಕೆ ಮಾಡಿದ ಕೀರ್ತಿ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ. ಎಲ್ಲರನ್ನೂ ಕಾಯಂ ಮಾಡುವ ಉದ್ದೇಶದಿಂದಲೇ ಇಂತಹ ಯೋಜನೆಯನ್ನು ಜಾರಿಗೆ ತಂದರು. ಇದರೊಂದಿಗೆ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟರೆ 3 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಅಲ್ಲದೆ ತಿಂಡಿಗೆ ಈ ಹಿಂದೆ 20 ರೂ. ನೀಡಲಾಗುತ್ತಿತ್ತು. ಅದನ್ನು 35 ರೂ.ಗೆ ಏರಿಕೆ ಮಾಡಲಾಯಿತು. ಇನ್ನು ಪೌರ ಕಾರ್ಮಿಕರು ಸ್ವಾವಲಂಬಿಯಾಗಿ ಬದುಕು ನಡೆಸಬೇಕೆಂದು ಸ್ವಸಹಾಯ ಗುಂಪು ರಚಿಸಿ 2 ಲಕ್ಷ ರೂ.ವರೆಗೂ ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನೂ ಜಾರಿಗೆ ತಂದರು. ಅಲ್ಲದೆ ಪ್ರತಿಭಾ ಪುರಸ್ಕಾರ ವಿತರಣೆ, ಪ್ರಧಾನಿ ಅವರಿಂದ ಪಾದಪೂಜೆ ಹೀಗೆ ಎಲ್ಲವನ್ನೂ ಬಿಜೆಪಿ ಮಾಡಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net