ಪ್ರಯಾಣ ದರ ಏರಿಕೆಗೆ ಬಿಜೆಪಿ ಸರ್ಕಾರ ಕಾರಣ; ಸಚಿವ ರಾಮಲಿಂಗಾ ರೆಡ್ಡಿ ವಾದ

ramalinga reddy
Published on

ಬೆಂಗಳೂರು: ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಹೆಚ್ಚಾಗಲು ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಪಾದಿಸಿದ್ದಾರೆ. ಜತೆಗೆ, ಬಿಜೆಪಿಗರು ಮನುವಾದಿಗಳು, ಮಹಿಳಾ ವಿರೋಧಿಗಳು. ಅವರಿಗೆ ಶಕ್ತಿ ಯೋಜನೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ವ್ಯಾಪಕವಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು. ವಿಧಾನಸೌಧದಲ್ಲಿ ಶುಕ್ರವಾರ ಆಯೋಜನೆಗೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ನಿಗಮಗಳು ಪ್ರಯಾಣ ದರ ಪರಿಷ್ಕರಣೆ ಮಾಡಬೇಕೆಂದು ನಿರ್ಣಯ ಮಾಡಿ ಕಳಿಸುತ್ತಿದ್ದರು. ಆದರೆ, ಆ ಬಗ್ಗೆ ಮಹತ್ವ ಕೊಟ್ಟಿರಲಿಲ್ಲ. ನಾನು ಸಾರಿಗೆ ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ ಹಿಂದಿನ ಬಿಜೆಪಿ ಸರ್ಕಾರದವರು 5900 ಕೋಟಿ ರೂ. ಸಾಲ ಬಿಟ್ಟುಹೋಗಿದ್ದರು. ಜತೆಗೆ ಪ್ರತಿ ನಿತ್ಯದ ವೇತನ ಹಾಗೂ ಇಂಧನ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ಪ್ರಯಾಣ ದರ ಹೆಚ್ಚಳ ಮಾಡಬೇಕಾಯಿತು ಎಂದು ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡರು. 2014ರಲ್ಲಿ ಟಿಕೆಟ್ ದರ ಏರಿಕೆ ಮಾಡಿದ್ದೆವು, ಡೀಸೆಲ್ ಕಡಿಮೆ ಆದಾಗ ದರ ಇಳಿಕೆ ಮಾಡಿದ್ದೆವು. ಹಾಗೆಯೇ, ಹತ್ತು ವರ್ಷಗಳಿಂದ ದರ ಪರಿಷ್ಕರಣೆ ಮಾಡಿರಲಿಲ್ಲ ಎಂದ ಅವರು 2020ರಲ್ಲಿ ವಾಯುವ್ಯ, ಕಲ್ಯಾಣ ಕರ್ನಾಟಕ ಹಾಗೂ ಕೆಎಸ್‌ಆರ್‌ಟಿಸಿಯವರು ಶೇಕಡ 15ರಷ್ಟು ಏರಿಕೆ ಮಾಡಿದ್ದರು, ಅಂದು ಯಡಿಯೂರಪ್ಪ ಸಿಎಂ ಆಗಿದ್ದರು, ಇಂದು (ಶುಕ್ರವಾರ) ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ಮಾಡಿದವರೇ ಸಾರಿಗೆ ಮಂತ್ರಿಗಳು ಆಗಿದ್ದರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ವಿರುದ್ಧ ಹರಿಹಾಯ್ದರು. ಸಾರಿಗೆ ನಿಗಮದ ಶೇ.70ರಷ್ಟು ಬಸ್‌ಗಳು ನಷ್ಟದಲ್ಲೇ ಸಂಚರಿಸುತ್ತವೆ. ಇದು ಸೇವೆ ಉದ್ದೇಶದಿಂದ ಕಾರ್ಯನಿರ್ವಹಿಸುತ್ತವೆ. ರಾಜ್ಯದ ಶೇ.97 ಗ್ರಾಮಗಳಲ್ಲಿ ಬಸ್ ಸಂಚರಿಸುತ್ತವೆ. ಈ ಬಿಜೆಪಿಯವರಿಗೆ ಲಾಭ ಯಾವುದು? ಆದಾಯ ಯಾವುದು ಎಂದು ಗೊತ್ತಿಲ್ಲ. ಸುಮ್ಮನೆ ಟ್ವೀಟ್ ಮಾಡುತ್ತಾರೆ. ಈ ರೀತಿ ಟ್ವೀಟ್ ಮಾಡುವುದಕ್ಕಾಗಿ ಒಂದಷ್ಟು ಜನ ಇದ್ದಾರೆಂದು ಟೀಕಿಸಿದರು. ನಿಗಮಗಳನ್ನು ತಕ್ಷಣದಲ್ಲಿ ನಿಭಾಯಿಸಲು ಸರ್ಕಾರ ಎರಡು ಸಾವಿರ ಕೋಟಿ ರೂ. ಸಾಲ ಪಡೆಯಲು ಖಾತ್ರಿ ನೀಡಿದೆ. ಈ ಸಾಲವನ್ನು ಸರ್ಕಾರವೇ ತೋರಿಸುವಂತಾಗಲಿ ಎಂದು ಬೇಡಿಕೆ ಇಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಈ ಬೇಡಿಕೆ ಈಡೇರಬಹುದು. ನಂತರ ಪರಿಸ್ಥಿತಿ ಸುಧಾರಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಶಕ್ತಿ ಯೋಜನೆ ಅನುಷ್ಠಾನದ ನಂತರ 4340 ಹೊಸ ಬಸ್ ಸೇರ್ಪಡೆ ಮಾಡಲಾಗಿದೆ ಜತೆಗೆ ಕಳೆದ 2 ವರ್ಷಗಳಲ್ಲಿ 1300 ಹಳೆ ವಾಹನಗಳನ್ನು ಪುನಶ್ಚೇತನಗೊಳಿಸಿ ಕಾರ್ಯಾಚರಣೆಗೊಳಿಸಲಾಗಿದೆ ಎಂದು ಹೇಳಿದ ಸಚಿವರು ಕಳೆದ 5-6 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಸರ್ಕಾರವು 9 ಸಾವಿರ ವಿವಿಧ ಹುದ್ದೆಗಳ ನೇಮಕ್ಕೆ ಅನುಮೋದನೆ ನೀಡಿದ್ದು, 3500 ಹುದ್ದೆ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ಒಂದು ಸಾವಿರ ವಿವಿಧ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಬಸ್ ಪ್ರಯಾಣ ದರ ಏರಿಕೆಯಿಂದ ಪುರುಷರು ಅಸಮಾಧಾನ ಸಹಜ. ಒಂದಷ್ಟು ದಿನ ಬೇಸರ ಮಾಡಿಕೊಳ್ಳಬಹುದು. ಆಮೇಲೆ ಸರಿ ಹೋಗುತ್ತದೆ. ಪ್ರಯಾಣ ದರ ಏರಿಕೆಗೆ ಬಿಜೆಪಿ ಸರ್ಕಾರ ಕಾರಣ. - ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net