

ಚಿತ್ರದುರ್ಗ: ಅನೇಕ ಸರ್ಕಾರಗಳು ಬದಲಾಗಿದ್ದರೂ ಮೀಸಲು ಪ್ರಮಾಣ ಹೆಚ್ಚಿಸುವ ಧೈರ್ಯವನ್ನು ಯಾವೊಂದು ಸರ್ಕಾರವೂ ತೋರಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಎಸ್‌ಸಿ,ಎಸ್‌ಟಿ ಮೀಸಲಾತಿ ಹೆಚ್ಚಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಬಿಜೆಪಿ ಜಿಲ್ಲಾ ಪರಿಶಿಷ್ಟ ಪಂಗಡ ಮೋರ್ಚಾ ಶನಿವಾರ ನಗರದ ಮದಕರಿ ನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಮಾತನಾಡಿದ ಅವರು,ಮಾಜಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ಜಾರಿಗೆ ಸಹಮತ ಸೂಚಿಸಿದ್ದರು.
ಈಗ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದ್ದಾರೆ. ಈ ಹೆಚ್ಚಳಕ್ಕೆ ಸಚಿವರು ಕಾರಣರಾಗಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಮೂಲಕ ತಳ ಸಮಾಜಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಪಕ್ಷದ ಕೋರ್‌ಕಮಿಟಿ ಹಾಗೂ ಸಚಿವ ಸಂಪುಟದ ಸಭೆ ನಾಗಮೋಹನ್ ವರದಿ ಜಾರಿಗೊಳಿಸಿದ್ದು ಸಂತಸ ತಂದಿದೆ.
ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ವರದಿ ಜಾರಿಗೆ ಒತ್ತಾ ಯಿಸಿ ಕಳೆದ 240 ದಿನಗಳಿಂದ ಧರಣಿ ನಡೆಸುತ್ತಿದ್ದನ್ನು ಪ್ರಸ್ತಾಪಿಸಿದ ಶಾಸಕರು,ನಾನು ಧರಣಿ ನಿರತ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ,ನಿಮ್ಮ ಜತೆ ನಾವಿದ್ದೇವೆ ಎಂದು ತಿಳಿಸಿದ್ದೆ. ಅವರ ಹೋರಾಟಕ್ಕೆ ಜಯ ಸಿಕ್ಕಿದೆ.
ನಮ್ಮ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಈಗಾಗಲೇ ರಾಜಕೀಯ ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಪಂಗಡ ಸಮುದಾಯದ ಶಿಕ್ಷಣ ಮತ್ತು ಉದ್ಯೋಗಕ್ಕೆ ನೆರವಾಗಲಿದೆ ಎಂದರು. ಬಿಜೆಪಿ ರಾಜ್ಯಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ ಮಾತನಾಡಿ, ಕಳೆದ 40 ವರ್ಷಗಳ ಬೇಡಿಕೆ ಇಂದು ಈಡೇರಿದೆ ಎಂದರು. ಮೋರ್ಚಾದ ಜಿಲ್ಲಾಧ್ಯಕ್ಷ ಶಿವಣ್ಣ,ಮುಖಂಡರಾದ ಮಂಜುನಾಥ್,ತಿಮ್ಮಣ್ಣ,ಸೋಮೇಂದ್ರ,ತಿಪ್ಪೇಸ್ವಾಮಿ, ಸಿ.ಬಿ. ಮೋಹನ್ ಮತ್ತಿತರರು ಇದ್ದರು.