

ಸಾಗರ: ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನಾನು ಅನುದಾನ ಬಿಡುಗಡೆ ಮಾಡಿಸಿದ್ದೇವೆ ಎಂದು ಬಿಜೆಪಿಗರು ಪದೇ ಪದೆ ಹೇಳುತ್ತಿದ್ದಾರೆ. ಅವರ ಕಾಲದಲ್ಲಿ ಆದೇಶ ಆಗಿತ್ತೇ ಹೊರತು ನಯಾಪೈಸೆ ಬಿಡುಗಡೆ ಆಗಿರಲಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದರು.
ನಗರದ ಗಾಂಧಿ ಮಂದಿರದಲ್ಲಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿ.ವೈ.ರಾಘವೇಂದ್ರ ಮತ್ತು ಹರತಾಳು ಹಾಲಪ್ಪ ಕಾಲದಲ್ಲಿ ಕಾಮಗಾರಿಗಳಿಗೆ ಆದೇಶ ಆಗಿತ್ತೇ ಹೊರತು ಯಾವುದಕ್ಕೂ ಹಣ ಬಿಡುಗಡೆ ಮಾಡಿಸಿರಲಿಲ್ಲ. ವಿಶ್ವವಿಖ್ಯಾತ ಜೋಗ ಜಲಪಾತ ಅಭಿವೃದ್ಧಿಗೆ 180 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದರೇ ಹೊರತು ನಯಾಪೈಸೆ ಬಿಡುಗಡೆ ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ 20 ಕೋಟಿ ರೂ. ಮೊದಲ ಕಂತು ಬಿಡುಗಡೆಯಾಗಿದ್ದು, ಇನ್ನು 70 ಕೋಟಿ ರೂ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ಬಿಜೆಪಿ ಜಿಲ್ಲೆಯಲ್ಲಿ ಜನರಿಗೆ ಸುಳ್ಳು ಆಶ್ವಾಸನೆಯಗಳನ್ನು ನೀಡಿದೆಯೇ ಹೊರತು ಯಾವುದೂ ಕಾರ್ಯಗತವಾಗಿಲ್ಲ ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿಹೆಚ್ಚು ಮತ ಕೊಡಿಸುವ ಹೊಣೆಗಾರಿಕೆ ನಮ್ಮೆಲರದಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಮನೆ ಮನಸ್ಸಿಗೆ ತಲುಪಿದೆ. ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ. ಏ.15ರಂದು ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಸಲಿದ್ದು, ಇಡೀ ಜಿಲ್ಲೆಯಿಂದ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಗೀತಾ ಶಿವರಾಜ್‌ಕುಮಾರ್ ನಮ್ಮ ಅಭ್ಯರ್ಥಿ. ಆದರೆ ನಾವೇ ಸ್ಪರ್ಧೆ ಮಾಡಿದ್ದೇವೆ ಎನ್ನುವ ರೀತಿಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಮಹಿಳೆಯರು, ರೈತರು, ಬಡವರಿಗೆ ನೀಡಿರುವ ಯೋಜನೆಗಳು ಇದುವರೆಗೂ ಯಾವ ಸರ್ಕಾರವೂ ನೀಡಿರಲಿಲ್ಲ. ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದಕ್ಕಿಂತ ಸಂವಿಧಾನ ಬದಲಾವಣೆ ಮಾಡುವತ್ತ ಹೆಚ್ಚು ಆಸಕ್ತಿ ಹೊಂದಿದೆ. ಇಂತಹ ಹೊತ್ತಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಪ್ರಜಾಪ್ರಭುತ್ವದ ಮೌಲ್ಯ ಉಳಿಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಅಗತ್ಯವಾಗಿದೆ. ನಾವೆಲ್ಲರೂ ಚುನಾವಣೆ ಆಗುವವರೆಗೂ ವಿಶ್ರಮಿಸುವಂತಿಲ್ಲ. ನಮ್ಮ ಬೂತ್‌ಗಳಲ್ಲಿ ಪಕ್ಷಕ್ಕೆ ಲೀಡ್ ಕೊಡಿಸುವುದು ನಮ್ಮೆಲರ ಜವಾಬ್ದಾರಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಎನ್.ಉಷಾ ಮಾತನಾಡಿದರು. ಪ್ರಮುಖರಾದ ಎಚ್.ಎಂ.ರವಿಕುಮಾರ್, ಐ.ಎನ್.ಸುರೇಶಬಾಬು, ಕೆ.ಹೊಳೆಯಪ್ಪ, ತಸ್ರೀಫ್, ಸರಸ್ವತಿ ನಾಗರಾಜ್, ಗಣಪತಿ ಮಂಡಗಳಲೆ, ಲಲಿತಮ್ಮ, ಮಹಾಬಲ ಕೌತಿ, ಮೈಕೆಲ್ ಡಿಸೋಜ, ಅಶೋಕ್ ಬೇಳೂರು ಇತರರಿದ್ದರು.