ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ವಿಫಲ

30bkl1 (1)
Published on


ವಿಜಯವಾಣಿ ಸುದ್ದಿಜಾಲ ಭಟ್ಕಳ
ಸರ್ಕಾರಗಳು 5 ವರ್ಷ ಪೂರೈಸುವುದು ಮುಖ್ಯವಲ್ಲ. 5 ವರ್ಷದ ಆಡಳಿತದಲ್ಲಿ ಎಷ್ಟು ಅಭಿವೃದ್ಧಿ ಮಾಡಿದೆ. ಯಾವೆಲ್ಲ ಸೌಕರ್ಯ ಕಲ್ಪಿಸಿದೆ ಎನ್ನುವುದು ಗಣನೆಗೆ ಬರುತ್ತದೆ. ರಾಜ್ಯದ ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ವಿ.ಆರ್. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಹಾಗೂ ಕಾಂಗ್ರೆಸ್ ವತಿಯಿಂದ ಕರೊನಾ ಸೋಂಕಿತರಿಗೆ ಅಗತ್ಯವಿರುವ ಔಷಧ, ಎನ್ 95 ಮಾಸ್ಕ್ ಹಾಗೂ ಆಕ್ಸಿಮೀಟರ್​ಗಳನ್ನು ಶನಿವಾರ ಉಪವಿಭಾಗಾಧಿಕಾರಿ ಮಮತಾದೇವಿ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಕರೊನಾ ನಿಯಂತ್ರಣದಲ್ಲಿ ಸರ್ಕಾರ ಎಡವಿದೆ. ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯವಿಲ್ಲ. ವೈದ್ಯರು, ನರ್ಸ್​ಗಳ ಕೊರತೆ, ವೈದ್ಯಕೀಯ ಉಪಕರಣಗಳ ಸಮಸ್ಯೆಗಳಿಂದ ತುಂಬಿದೆ. ಕರೊನಾ ಸಂಕಷ್ಟದ ಸಮಯದಲ್ಲಿ ಸೋಂಕಿತರಿಗೆ ಅಗತ್ಯವಿರುವ ಔಷಧ ಉಪಕರಣಗಳ ಪೂರೈಕೆಗಳ ಬಗ್ಗೆ ಎಲ್ಲರೊಂದಿಗೆ ರ್ಚಚಿಸಿ ಅಗತ್ಯ ಇರುವ ಕಡೆ ಸರಬರಾಜು ಮಾಡುತ್ತಿದ್ದೇವೆ. ಭಟ್ಕಳ ಸರ್ಕಾರಿ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಿತ್ತಿರುವ ಬಗ್ಗೆ ಗಮನಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ಅಗತ್ಯ ಇರುವ ಯಾವುದೇ ಸಹಾಯ ಬೇಕಾದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಇಲ್ಲವೇ ನನ್ನ ಗಮನಕ್ಕೆ ತಂದರೆ ನಮ್ಮ ಟ್ರಸ್ಟ್ ಸಹಾಯ ಮಾಡುತ್ತದೆ ಎಂದರು.
ಮುಖಂಡ ಪ್ರಶಾಂತ ದೇಶಪಾಂಡೆ, ಮಾಜಿ ಶಾಸಕ ಮಂಕಾಳ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಪುರಸಭೆ ಅಧ್ಯಕ್ಷ ಪರ್ವೆಜ್ ಕಾಶೀಂಜೀ, ತಹಸೀಲ್ದಾರ್ ರವಿಚಂದ್ರ, ಸರ್ಕಾರಿ ಆಸ್ಪತೆ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ತಾಲೂಕು ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಮಜೀದ್ ಇತರರು ಇದ್ದರು.

ಕೆಲಸ ಮಾಡಿ ತೋರಿಸಲಿ
ಶಾಸಕ ಸುನೀಲ ಅವರಿಗೆ ಅನುಭವದ ಕೊರತೆ ಇದೆ. ಸ್ಥಳೀಯ ಜನರ, ಸಂಘ ಸಂಸ್ಥೆಗಳ ಒತ್ತಡ ಮನವಿಯ ಮೇರೆಗೆ ಬದಲಾವಣೆ ಮಾಡಲಾಗಿದೆ. ಜನಪ್ರತಿನಿಧಿಯಾಗಿ ಜನರ ಕೋರಿಕೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಹೆದ್ದಾರಿ ಕಾಮಗಾರಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಅತಿಕ್ರಮಣದಾರರಿಗೆ, ಗೂಡಂಗಡಿಕಾರಿಗೆ ಪರಿಹಾರ ಒದಗಿಸಿದ್ದೇನೆ. ಶಾಸಕರು ವಿಷಯದ ಬಗ್ಗೆ ಅರಿವಿಲ್ಲದೆ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರದೆ ಸರ್ಕಾರ, ಅವರದೆ ಸಂಸದರು ಇದ್ದಾಗ ಆರೋಪ ಮಾಡುವ ಬದಲು ಕೆಲಸ ಮಾಡಿ ತೋರಿಸಲಿ ಎಂದು ಆರ್.ವಿ. ದೇಶಪಾಂಡೆ ಅವರು ಸಲಹೆ ನೀಡಿದರು.




ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net