ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಸಿದ್ದರಾಮಯ್ಯರಿಂದ ಆರ್​ಎಸ್​ಎಸ್​ ಟೀಕೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್​ ತಿರುಗೇಟು

siddu
Published on

ವಿಜಯಪುರ: ಆರ್ ಎಸ್ ಎಸ್ ಬಹುದೊಡ್ಡ ದೇಶಭಕ್ತ ಸಂಘಟನೆ, ಪ್ರವಾಹ ಬರಲಿ, ಬರಗಾಲ ಬರಲಿ, ಯುದ್ಧವೇ ಆಗಲಿ ಆಗ ಈ ಸಂಘಟನೆ ಮಾಡುವ ಕೆಲಸ ಸಾಮಾನ್ಯದಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್​ ಹೇಳಿದ್ದಾರೆ.

ಇಂತಹ ಮಹಾನ್​ ಸಂಘಟನೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ಬುದ್ಧಿ ಭ್ರಮಣೆ ಆಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.

ಸೋನಿಯಾ ಗಾಂಧಿ ಅವರ ಕೃಪೆಗೆ ಪಾತ್ರರಾಗಬೇಕು ಎಂಬ ಕಾರಣದಿಂದ ಇವರು ಆರ್​ಎಸ್​ಎಸ್​ ಅನ್ನು ಬೈಯ್ಯುತ್ತಾರೆ. ಸಿದ್ದರಾಮಯ್ಯನವರು ಅತ್ಯಂತ ಕೀಳು ಮಟ್ಟದ, ಅವಮಾನಕರ ಹಾಗೂ ಅಪ್ರಬುದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಆದವರು ನಿಕ್ಕರ್ ಸುಟ್ಟು ಹಾಕುವುದು ಎಂದರೆ ಅವರು ಬಳಸುವ ಪದದ ಬಗ್ಗೆ ಎಚ್ಚರಿಕೆ ಇದೆಯೇ ಎಂದಿದ್ದಾರೆ.

ಈ ಹಿಂದೆ ಆರ್​ಎಸ್​ಎಸ್​ ಅನ್ನು ಎರಡೆರಡು ಬಾರಿ ನಿಷೇಧಿಸಿದ್ದೀರಿ, ಅದೇನು ಈಗ ನಿಂತುಹೋಯಿತಾ ಎಂದು ಪ್ರಶ್ನಿಸಿರುವ ಅವರು ಉತ್ತರ ಪ್ರದೇಶದ 405 ಸೀಟುಗಳಲ್ಲಿ 397 ಸೀಟುಗಳಿಗೆ ಠೇವಣಿಯೇ ಇಲ್ಲ, ನೀವು ಎಷ್ಟರ ಮಟ್ಟಿಗೆ ಅವಮಾನ ಮಾಡುತ್ತೀರಿ ಅಷ್ಟೇ ದೊಡ್ಡ ಮಟ್ಟದಲ್ಲಿ ಆರ್​ಎಸ್​ಎಸ್​ ಬೆಳೆಯುತ್ತೆ ಎಂದು ಹೇಳಿದ್ದಾರೆ.

ನೀವು ಆರ್​ಎಸ್​ಎಸ್​ ನಿಕ್ಕರ್​ ಸುಟ್ಟು ಹಾಕಿದ್ದರೆ, ಜನ ನಿಮ್ಮನ್ನು ಸುಟ್ಟು ಹಾಕುತ್ತಿದ್ದಾರೆ. ಜನರ ಮನಸ್ಸಿನಿಂದ ನಿಮ್ಮನ್ನು ಕಿತ್ತು ಹಾಕತ್ತಿದ್ದಾರೆ. ಯಾರೋ ಹೇಳಿಕೊಟ್ಟ ಹಾಗೆ ಸಿದ್ದರಾಮಯ್ಯನವರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net