

ಹಳಿಯಾಳ: ಹಳಿಯಾಳ-ದಾಂಡೇಲಿಯಲ್ಲಿ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಜೋಡೆತ್ತಿನಂತೆ ಶ್ರಮವಹಿಸಿ ಬಿಜೆಪಿ ಬೆಂಬಲಿತ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅದೇ ರೀತಿ ಮುಂಬರುವ ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ಸಹಕಾರಿ ಸಂಘದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ನಿರ್ದೇಶಕರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದಶಕಗಳ ಹಿಂದೆ ತಾಲೂಕಿನ ಸಹಕಾರಿ ಸಂಘ ಎಂದರೆ ಕೆಡಿಸಿಸಿ ಬ್ಯಾಂಕ್‌ನವರು ಅಸಡ್ಡೆ ತೋರುತ್ತಿದ್ದರು. ಆದರೆ, ವಿ.ಡಿ. ಹೆಗಡೆ ಹಾಗೂ ಘೋಟ್ನೇಕರ ನಿರ್ದೇಶಕರಾದ ನಂತರ ತಾಲೂಕಿನ ಸಹಕಾರಿ ಸಂಘಗಳಿಗೆ ಬಲ ಬಂದಂತಾಗಿದೆ. ಇವರು ಜಾರಿ ಮಾಡಿದ ಹಲವು ಯೋಜನೆಗಳಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಶ್ಲಾಘಿಸಿದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸಿಗುವ ಸವಲತ್ತು ಯಾವ ಬ್ಯಾಂಕ್‌ನಲ್ಲಿಯೂ ಸಿಗುವುದಿಲ್ಲ. ರೈತರು ಕೇವಲ ಸಾಲ ಪಡೆಯುವುದು ಮಾಡಬಾರದು. ಪಡೆದ ಸಾಲವನ್ನು ಮರುಪಾವತಿಸಿದರೆ ಸೊಸೈಟಿಗಳು ಬೆಳವಣಿಗೆ ಹೊಂದಲು ಸಾಧ್ಯ. ಪಟ್ಟಣದಲ್ಲಿ ದಿನೇ ದಿನೆ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದೆ. ಹಳಿಯಾಳದಲ್ಲಿ ಸುಸಜ್ಜಿತವಾದ ಆಸ್ಪತ್ರೆ ಇಲ್ಲ, ಆಸ್ಪತ್ರೆಗೆ ಯಾವುದೇ ರೋಗಿ ಹೋದರೂ ಧಾರವಾಡ ಅಥವಾ ಹುಬ್ಬಳ್ಳಿ ಆಸ್ಪತ್ರೆಗೆ ಬರೆದುಕೊಡುತ್ತಾರೆ. ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ 45 ವರ್ಷಗಳಿಂದ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದರು.
ಎಸ್.ಎಲ್. ಘೋಟ್ನೇಕರ ಮಾತನಾಡಿ, ಇದು ನಮ್ಮ ಗೆಲುವಲ್ಲ, ಕಾರ್ಯಕರ್ತರ ಗೆಲುವು ಎಂದರು. ಮಂಡಲದ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಪ್ರಮುಖರಾದ ಮಂಗೇಶ ದೇಶಪಾಂಡೆ, ಶ್ರೀನಿವಾಸನ ಘೋಟ್ನೇಕರ ಇತರರಿದ್ದರು.