ಜಿಲ್ಲೆಯಾದ್ಯಂತ ಮತ ಎಣಿಕೆ ಬೆಳಗ್ಗೆ ೮ಕ್ಕೆ ಶುರುವಾಗಿದ್ದರೂ ಕೈ ಎಣಿಕೆ ಆದ್ದರಿಂದ ವಿಳಂಬವಾಗಿಯೇ ಸಾಗಿತ್ತು. ಎಲ್ಲಾ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲೂ ಭಾರೀ ಸಂಖ್ಯೆಯಲ್ಲಿ ಪ್ರಮುಖ ಪಕ್ಷಗಳ ಕಾರ್ಯಕರ್ತರು ನೆರೆದಿದ್ದರು. ವಿಜಯೋತ್ಸವಕ್ಕೆ ನಿರ್ಬಂಧ, ನಿಷೇಧಾಜ್ಞೆ ಇದ್ದರೂ ಅದನ್ನು ಕಡೆಗಣಿಸಿ ಹಲವೆಡೆಗಳಲ್ಲಿ ವಿಜಯೋತ್ಸವ ಆಚರಿಸುವುದು ಕಂಡು ಬಂತು. ರಾಜಕೀಯ ರಹಿತ ಚುನಾವಣೆ ಎಂದೇ ಗ್ರಾ.ಪಂ ಚುನಾವಣೆ ಪರಿಗಣಿಸಲ್ಪಟ್ಟರೂ ಬೆಂಬಲಿಗರು ಧ್ವಜ ಹಿಡಿದುಕೊಂಡೇ ಮತ ಎಣಿಕೆ ಕೇಂದ್ರದ ಸುತ್ತಲೂ ಸೇರಿದ್ದು ಕಂಡುಬಂತು. ಕೇಂದ್ರಗಳ ಸುತ್ತಲೂ ಬಿಗಿಬಂದೋಬಸ್ತ್ ಹಾಕಲಾಗಿತ್ತು. ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಕೂಡಾ ವಿಧಿಸಲಾಗಿತ್ತು.
ಎಸ್‌ಡಿಪಿಐ ಹಲವು ಕ್ಷೇತ್ರಗಳಲ್ಲಿ ಬಲವರ್ಧನೆ ಮಾಡಿಕೊಂಡಿರುವುದು ಕಂಡುಬಂದಿದ್ದರೆ ಕಾಂಗ್ರೆಸ್ ಕೂಡಾ ಅನೇಕ ಕಡೆ ಹಿಂದಿಗಿಂತ ಕೊಂಚ ಸುಧಾರಣೆ ಕಂಡಿದೆ.
ಸಂಸದರ ಆದರ್ಶ ಗ್ರಾಮದಲ್ಲಿ ಬಿಜೆಪಿಯ ಮಾಜಿ ಅಧ್ಯಕ್ಷರು ಸೋಲನುಭವಿಸಿರುವುದು ಅಚ್ಚರಿ ತಂದಿದೆ. ಅನೇಕ ನಿರೀಕ್ಷೆಯ ಸ್ಥಾನಗಳಲ್ಲಿ ಬಿಜೆಪಿ ಹಿನ್ನಡೆ ಕಂಡಿದೆ. ಆದರೂ ಸದ್ಯದ ಮಟ್ಟಿಗೆ ಆರಂಭಿಕ ಫಲಿತಾಂಶದಲ್ಲಿ ಒಟ್ಟಾರೆಯಾಗಿ ಬಿಜೆಪಿ ಮುನ್ನಡ ಸಾಧಿಸಿದೆ.
ಅವಿರೋಧ ಆಯ್ಕೆಯೂ ಸೇರಿದಂತೆ ಘೋಷಿತ ಸ್ಥಾನಗಳಲ್ಲಿ ೧೫೧ ಸ್ಥಾನ ಬಿಜೆಪಿಗೆ ಸಿಕ್ಕಿದ್ದರೆ ಕಾಂಗ್ರೆಸ್ ೪೭ ಸ್ಥಾನ ಗೆದ್ದಿದೆ.
ಮಂಗಳೂರು: ಗ್ರಾ.ಪಂ ಚುನಾವಣೆಯ ಆರಂಭಿಕ ಟ್ರೆಂಡ್‌ನಲ್ಲಿ ದ.ಕ ಜಿಲ್ಲೆಯಲ್ಲಿ ಬಿಜೆಪಿ ಮುನ್ನಡೆ ಕಂಡಿದೆ.