ತಲೆತಗ್ಗಿಸುವಂತಾದ ಸಿಎಂ ಸಿದ್ದರಾಮಯ್ಯ ಹೇಳಿಕೆ

Reddy 1
Published on

ಉಡುಪಿಯಲ್ಲಿ ಜನಾರ್ದನ ರೆಡ್ಡಿ ಆಕ್ರೋಶ

ಪಾಕಿಸ್ತಾನದ ಪರ ಮಾತು ಮೂರ್ಖತನ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವಂತಹ ಅನಿವಾರ್ಯತೆ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಕರ್ನಾಟಕ ರಾಜ್ಯದ ಜನರು ನಾಚಿಕೆ ಮತ್ತು ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ. ನೀವು, ನಾವು ಯಾರೂ ಇಲ್ಲಿ ಶಾಶ್ವತವಲ್ಲ. ಈ ದೇಶ, ಇಲ್ಲಿನ ಭೂಮಿ, ನೆಲ-ಜಲ ಮಾತ್ರ ಶಾಶ್ವತ. ಪಾಕಿಸ್ತಾನದ ಪರವಾಗಿ ಹೇಳಿಕೆ ಕೊಡುವುದು ಮೂರ್ಖತನವಾಗಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಕುಟುಂಬ ಸಮೇತ ಏ.27ರಂದು ಬೆಳಗ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೃಷ್ಣನೇ ಉತ್ತರಿಸುತ್ತಾನೆ

Reddy 2
ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಆ ಸ್ಥಾನ, ಅಧಿಕಾರ ಶಾಶ್ವತವಲ್ಲ. ಯಾವಾಗ ಇಳಿದು ಹೋಗುತ್ತಾರೋ ಗೊತ್ತಿಲ್ಲ. ವಯಸ್ಸು 76 ಆಗಿದೆ. ಭರತಭೂಮಿಯ ವಿಚಾರವಾಗಿ ಸರಿಯಾಗಿ ಮಾತನಾಡಿ. ನಾವೆಲ್ಲ ಪುಣ್ಯ ಭೂಮಿಯಲ್ಲಿದ್ದೇವೆ. ಈ ನೆಲದ, ಧರ್ಮದ ಪರವಾಗಿ ಮಾತನಾಡಿ ಪುಣ್ಯಕಟ್ಟಿಕೊಳ್ಳಿ. ಅವರ ಹೇಳಿಕೆ ರಾಕ್ಷಸಿ ಮನೋಭಾವದ್ದಾಗಿದೆ. ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಶ್ರೀಕೃಷ್ಣನಿಗೇ ಬಿಡಬೇಕು. ದೇವರು ಅವರಿಗೆ ಸದ್ಬುದ್ಧಿ ಕೊಡಲಿ. ಉಡುಪಿ ಕೃಷ್ಣನೇ ನಿಮಗೆ ಉತ್ತರ ಕೊಡುತ್ತಾನೆ ಎಂದರು.

ಶ್ರೀಗಳ ಕಾರ್ಯ ಅನನ್ಯ

ಇದಕ್ಕೂ ಮೊದಲು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದ ರೆಡ್ಡಿ, ಪರ್ಯಾಯ ಸುಗುಣೇಂದ್ರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಕೋಟಿ ಗೀತಾ ಲೇಖನ ಯಜ್ಞ ಕೈಗೊಳ್ಳುವ ಮೂಲಕ ಶ್ರೀಗಳು ಜಗದಲ್ಲಿ ಧರ್ಮ ಜಾಗೃತಿ, ಜನರಲ್ಲಿ ಧಾರ್ಮಿಕ ಭಾವ ಬೆಳೆಸುತ್ತಿದ್ದಾರೆ. ಅವರ ಕಾರ್ಯ ಅನನ್ಯ ಎಂದರು. ಶ್ರೀಗಳಿಂದ ಗೀತಾ ಲೇಖನ ದೀಕ್ಷೆ ಪಡೆದರು.

ಪ್ರಧಾನಿ ಮೋದಿಗೆ ದೇವರು ಶಕ್ತಿ ನೀಡಲಿ

Reddy 3
ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಘಟನೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಯಾವಾಗ ಧರ್ಮಕ್ಕೆ ತೊಂದರೆ ಆಗುತ್ತದೆಯೋ ಆ ವೇಳೆಯಲ್ಲಿ ಮತ್ತೆ ಬಂದು ಅಧರ್ಮದ ನಾಶ ಮಾಡುತ್ತೇನೆ ಎಂದು ಭಗವದ್ಗೀತೆಯಲ್ಲಿಯೇ ಶ್ರೀಕೃಷ್ಣ ಹೇಳಿದ್ದಾನೆ. ಅಂತಹ ಕಾಲ ಬಂದಿದೆ. ದುಷ್ಟರ ಸಂಹಾರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಅವರಿಗೆ ಶ್ರೀಕೃಷ್ಣ ಪರಮಾತ್ಮ ಮತ್ತು ಕೊಲ್ಲೂರಿನ ತಾಯಿ ಮೂಕಾಂಬಿಕಾದೇವಿ ಶಕ್ತಿ ಕೊಡಲಿ. ಸನಾತನ ಧರ್ಮದ ರಕ್ಷಣೆಯಾಗಲಿ. ಆಧ್ಯಾತ್ಮಿಕ ನೆಲೆಯಾಗಿರುವ ಭಾರತದಲ್ಲಿ ಸದಾ ಶಾಂತಿ ನೆಲೆಯಾಗಲಿ ಎಂದು ಜನಾರ್ದನ ರೆಡ್ಡಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net