

ಮಂಗಳೂರು: ಮೊಗವೀರ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡುವಲ್ಲಿ ಬಿಜೆಪಿ ವಿಫಲವಾಗಿದ್ದು, ಏಕೈಕ ಆಸೆರೆಯಾಗಿದ್ದ ಮೀನುಗಾರಿಕಾ ನಿಗಮದ ಅಧ್ಯಕ್ಷ ಸ್ಥಾನವನ್ನೂ ಸುಳ್ಯದ ಪ್ರಭಾವಿ ಸಮುದಾಯಕ್ಕೆ ನೀಡಿ ವಂಚನೆ ಮಾಡಿರುವುದನ್ನು ವಿರೋಧಿಸಿ, ಪ್ರತಿಭಟನಾ ರೂಪವಾಗಿ ನಾನೂ ಸಹಿತ, ಮೀನುಗಾರರ ಮುಖಂಡರು ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ರಾಮಚಂದ್ರ ಬೈಕಂಪಾಡಿ ತಿಳಿಸಿದ್ದಾರೆ.
ಗುರುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಬೈಕಂಪಾಡಿಯಲ್ಲಿ ಜರುಗಿದ ಕರಾವಳಿಯ ಮೂರು ಜಿಲ್ಲೆಯ ಮೀನುಗಾರರ ಸಭೆಯ ತೀರ್ಮಾನದಂತೆ ಈ ನಿರ್ಧಾರಕ್ಕೆ ಬರಲಾಗಿದ್ದು, ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯನ್ನೂ ಮೀನುಗಾರ ಸಮುದಾಯ ಬಹಿಷ್ಕರಿಸುವ ಘೋಷಣೆ ಮಾಡಲಾಗಿದೆ. ಜಿಲ್ಲಾ ಮೀನುಗಾರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ, 9 ಮಂದಿ ಸದಸ್ಯರು, ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮಂಗಳೂರಿನಲ್ಲಿ ಮೀನುಗಾರರನ್ನು ಸೇರಿಸಿ ಬೃಹತ್ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.