

ಮೈಸೂರು: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಲಕ್ಷ್ಮಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಕಾನೂನು ಪ್ರಕೋಷ್ಠ ನಗರ ಪೊಲೀಸ್ ಆಯುಕ್ತರಿಗೆ ಬುಧವಾರ ದೂರು ಸಲ್ಲಿಸಿದೆ.
ಉದಯಗಿರಿ ಠಾಣೆ ಮುಂದೆ ನಡೆದ ಗಲಾಟೆ ಬಗ್ಗೆ ಮಾತಾಡುವ ವೇಳೆ ದಾಂದಲೆಗೆ ಆರ್‌ಎಸ್‌ಎಸ್ ಕಾರಣ. ಆರ್‌ಎಸ್‌ಎಸ್ ಕಾರ್ಯಕರ್ತರು ಮಾರುವೇಷದಲ್ಲಿ ಬಂದು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ದುರುದ್ದೇಶದಪೂರಿತ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್ ಸಂಘಟನೆಯು ತನ್ನದೇ ಆದ ಘನತೆ, ಗೌರವಗಳೊಂದಿಗೆ ಈ ದೇಶದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದೆ. 100 ವರ್ಷಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ನಿರತವಾಗಿದೆ. ಕೋಟ್ಯಂತರ ಸ್ವಯಂ ಸೇವಕರು ಸಂಘಟನೆಯಡಿ ದೇಶ ಸೇವೆ ಮಾಡುತ್ತಿದ್ದಾರೆ. ಲಕ್ಷ್ಮಣ್ ಹೇಳಿಕೆಯಿಂದ ರಾಷ್ಟ್ರ ಭಕ್ತರ ಮನಸ್ಸಿಗೆ ನೋವಾಗಿದೆ. ಅವರನ್ನು ತಕ್ಷಣ ಬಂಧಿಸಿ ಶಿಸ್ತು ಕ್ರಮ ಜರುಗಿಸಿ, ಎಂದು ದೂರಿನಲ್ಲಿ ಕೋರಿದ್ದಾರೆ. ದೂರಿನ ಪ್ರತಿಯನ್ನು ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವ, ಡಿಐಜಿ ಅವರಿಗೂ ಸಲ್ಲಿಸಿದ್ದಾರೆ.
ಜಿಲ್ಲಾ ಕಾನೂನು ಪ್ರಕೋಷ್ಟದ ಸಂಚಾಲಕ ಜಿ.ನಂಜುಂಡಸ್ವಾಮಿ, ಜಿಲ್ಲಾ ವಕ್ತಾರ ದಯಾನಂದ ಪಟೇಲ್, ಸಹ ಸಂಚಾಲಕ ಎಚ್.ಕೆ.ಭಾಗ್ಯ, ನಗರ ಕಾನೂನು ಪ್ರಕೋಷ್ಠದ ಸದಸ್ಯ ಬಿ.ಎನ್.ಗಂಗಾಧರಪ್ಪ, ಮಾಧ್ಯಮ ಸಂಚಾಲಕರಾದ ಬಿ.ಎಂ.ಸಂತೋಷ್ ಕುಮಾರ್, ದಕ್ಷಿಣಮೂರ್ತಿ ಇದ್ದರು.