ಬಿಜೆಪಿಗೆ ಹೆಬ್ಬಾರ ‘ಯಲ್ಲಾಪುರದಲ್ಲಿ ಬಲು ಭಾರ’

shivaram hebbar
Published on

ಶ್ರೀಧರ ಅಣಲಗಾರ ಯಲ್ಲಾಪುರ

ಇಲ್ಲಿನ ಶಾಸಕ ಶಿವರಾಮ ಹೆಬ್ಬಾರ ಬಿಜೆಪಿಯಿಂದ ಆಯ್ಕೆಯಾಗಿ 2 ವರ್ಷಗಳು ಕಳೆದರೂ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಕಡೆ ಒಲವು ಹೊಂದಿದ್ದಾರೆ. ಆದರೂ ಬಿಜೆಪಿ ತೊರೆದಿಲ್ಲ, ಕಾಂಗ್ರೆಸ್ ಸೇರಿಲ್ಲ. ಹೆಬ್ಬಾರ ಅವರ ಈ ನಡೆ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಅಸಹಕಾರದ ಕಾರಣಕ್ಕಾಗಿ ಮುನಿಸಿಕೊಂಡ ಶಾಸಕರು ಪಕ್ಷದಿಂದ ದೂರವೇ ಉಳಿದಿದ್ದಾರೆ. ಪಕ್ಷದ ಹಿರಿಯರು ಕ್ಷೇತ್ರಕ್ಕೆ ಬಂದಾಗಲೂ ಅತ್ತ ಸುಳಿದಿಲ್ಲ. ಪಕ್ಷ ಸಂಘಟನೆಯಲ್ಲಾಗಲಿ, ಪಕ್ಷದ ಯಾವುದೇ ವಿಚಾರಗಳಲ್ಲಾಗಲೀ ಕಾಣಿಸಿಕೊಂಡಿಲ್ಲ. ಈ ನಡುವೆ ಅವರ ಬೆಂಬಲಿಗರೊಂದಿಗೆ ಮಗ ವಿವೇಕ ಹೆಬ್ಬಾರ, ಕಾಂಗ್ರೆಸ್ ಸೇರಿದ್ದಾರೆ. ಹೆಬ್ಬಾರ ಸಹ ಆಗಾಗ ಬಿಜೆಪಿ ವಿರುದ್ಧದ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕುತ್ತಿದ್ದಾರೆ.

ಕ್ಷೇತ್ರದ ಶಾಸಕರಾಗಿ ಹೆಬ್ಬಾರ ಕ್ಷೇತ್ರಾದ್ಯಂತ ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜನರ ನಡುವೆ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹೆಬ್ಬಾರ ಕಾಂಗ್ರೆಸ್ ಸೇರದೇ ಹೋದರೂ, ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಸಹ ಅವರೊಂದಿಗೆ ಓಡಾಡುತ್ತ ಗುರುತಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ಆದರೂ ಬಿಜೆಪಿಗೆ ಮಾತ್ರ ಮೂಕ ಪ್ರೇಕ್ಷಕನಾಗಿರುವ ಅನಿವಾರ್ಯತೆಯಿದೆ. ಪಕ್ಷದ ಹಿರಿಯರು ಕಠಿಣ ಕ್ರಮ ಕೈಗೊಳ್ಳುತ್ತಾರೆಂಬ ಸಿದ್ಧ ಉತ್ತರ ವರ್ಷಗಳಿಂದಲೂ ಬರುತ್ತಿದೆ. ಆದರೆ ಕ್ರಮ ಮಾತ್ರ ಆಗಿಲ್ಲ.

ಶಾಸಕ ಹೆಬ್ಬಾರ ಅವರಿಗೆ ನೈತಿಕತೆ ಇದ್ದರೆ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿ ಚುನಾವಣೆ ಎದುರಿಸಲಿ’ ಎಂದು ಆಗಾಗ ಬಿಜೆಪಿ ಮುಖಂಡರು ಸವಾಲು ಹಾಕುತ್ತಿದ್ದಾರಷ್ಟೇ! ಇದಕ್ಕೆ ಪ್ರತಿಯಾಗಿ ಹೆಬ್ಬಾರ ಅವರೂ, ’ನಿಮಗೆ ತಾಕತ್ತಿದ್ದರೆ ನನ್ನನ್ನು ಉಚ್ಛಾಟಿಸಿ’ ಎಂದು ಸವಾಲು ಹಾಕುತ್ತಿದ್ದಾರೆ.  ಬಿಜೆಪಿ ಉಚ್ಛಾಟಿಸುವ ಧೈರ್ಯ ಮಾಡುತ್ತಿಲ್ಲ. ಉಚ್ಛಾಟಿಸಿದಲ್ಲಿ ಹೆಬ್ಬಾರ ಅವರ ಬಿಜೆಪಿ ಸದಸ್ಯತ್ವ ಮಾತ್ರ ಹೋಗುತ್ತದೆ. ಶಾಸಕ ಸ್ಥಾನ ಹಾಗೆಯೇ ಉಳಿದು, ಅವರು ಪಕ್ಷೇತರರಾಗಿ ಮುಂದುವರಿಯುತ್ತಾರೆ. ಆಗ ಕಾಂಗ್ರೆಸ್ ಸೇರಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ. ಹಾಗಾಗಿ ಉಚ್ಛಾಟಿಸಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಇದನ್ನು ಅರಿತೇ ಹೆಬ್ಬಾರ ಸಹ ಈಗಲೇ ಪಕ್ಷ ತೊರೆದು ಕಾಂಗ್ರೆಸ್ ಸೇರುವ ತರಾತುರಿಯಲ್ಲಿಲ್ಲ. ಈಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದರೆ ಉಪಚುನಾವಣೆ ಎದುರಿಸಬೇಕಾಗುತ್ತದೆ. ಸದ್ಯ ಹೀಗೆ ಮುಂದುವರಿದು ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸೇರುವುದು ಹೆಬ್ಬಾರ ಯೋಜನೆ ಎಂಬುದು ಬೆಂಬಲಿಗರ ಮಾತು.

 ಡಬ್ಬಿ ಬಡಿದು ಬೆಕ್ಕು ಓಡಿಸಿದಂತಾಗಿದೆ ಬಿಜೆಪಿ ಕಥೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವುದು ಅತ್ಯುತ್ತಮ ಬಜೆಟ್ ಎಂದು ಶಾಸಕ ಶಿವರಾಮ ಹೆಬ್ಬಾರ ಹೊಗಳಿರುವುದು ಬಿಜೆಪಿಗರನ್ನು ಕೆರಳಿಸಿದೆ. ಹೆಬ್ಬಾರ ವಿರುದ್ಧ ಮತ್ತದೇ ಹೇಳಿಕೆಗಳ ಮೂಲಕ ಅವರು ಆಕ್ರೋಶ ಹೊರಹಾಕುತ್ತಿದ್ದಾರೆ. ಬಿಜೆಪಿಯವರನ್ನು ಕೆರಳಿಸಬೇಕೆಂಬ ಉದ್ದೇಶದಿಂದಲೇ ಹೆಬ್ಬಾರ ಅವರು ಬಜೆಟ್ ಅನ್ನು ಹೊಗಳಿರುವುದು ಎಂದು ಅವರ ಆಪ್ತವಲಯದಲ್ಲಿ ರ್ಚಚಿಸಲಾಗುತ್ತಿದೆ. ಒಟ್ಟಾರೆ ಕೆರಳಿ ಕೆಂಡವಾಗಿರುವ ಬಿಜೆಪಿ ಏನೂ ಮಾಡದ ಅಸಹಾಯಕತೆಯಲ್ಲಿ ಹೇಳಿಕೆ ನೀಡಿ ಸವಾಲು ಹಾಕುವುದರಲ್ಲಿ ನಿರತವಾಗಿದೆ. ಬಿಜೆಪಿಯವರ ನಡೆ ’ಡಬ್ಬಿ ಬಡಿದು ಬೆಕ್ಕನ್ನು ಓಡಿಸಿದ ಹಾಗೆ’ ಎಂಬ ವ್ಯಂಗ್ಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net