ಅಭಿವೃದ್ಧಿ ಆಧಾರದಲ್ಲಿ ಬಿಜೆಪಿ ಚುನಾವಣೆ: ಬಿವೈಆರ್

bjp
ಮಹಾನಗರ ಪಾಲಿಕೆ ಮಾಜಿ ಸದಸ್ಯ ಐಡಿಯಲ್ ಗೋಪಿ, ಕಾಂಗ್ರೆಸ್ ಮುಖಂಡ ಮೋಹನ್ ಸೇರಿ ಅನೇಕರು ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಎಸ್.ಎನ್.ಚನ್ನಬಸಪ್ಪ, ಟಿ.ಡಿ.ಮೇಘರಾಜ್, ಮೋಹನ್ ರೆಡ್ಡಿ, ಡಿ.ಎಸ್.ಅರುಣ್ ಇತರರಿದ್ದರು.
Published on

ಶಿವಮೊಗ್ಗ: ನಾವು ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ. ಆದರೆ ಕಾಂಗ್ರೆಸ್‌ನವರು ವೃಥಾ ಆರೋಪಗಳಲ್ಲಿ ತೊಡಗಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿನ ಯೋಜನೆಗಳು, ಕಾಮಗಾರಿಗಳನ್ನು ತನಿಖೆಗೆ ಆಗ್ರಹಿಸುವುದೇ ಅವರ ಸಾಧನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಾಹಿ ಗಾರ್ಮೆಂಟ್ಸ್ ಜಮೀನು ಮಂಜೂರು ವಿಚಾರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾಡಿದ ಆರೋಪಗಳಿಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿ, ಅವರು ಯಾವುದನ್ನು ಬೇಕಾದರೂ ತನಿಖೆ ಮಾಡಿಸಿಕೊಳ್ಳಲಿ. ಉದ್ಯಮಿಗಳು ಬರುವುದು, ಉದ್ಯೋಗ ಸೃಷ್ಟಿಯಾಗುವುದು ಅವರಿಗೆ ಇಷ್ಟವಿದ್ದಂತಿಲ್ಲ ಎಂದು ತಿರುಗೇಟು ನೀಡಿದರು.
ವಿಮಾನ ನಿಲ್ದಾಣ ಕಾಮಗಾರಿ ತನಿಖೆಯಾಗಬೇಕು ಎನ್ನುತ್ತಿರುವವರು ಮಾಡಿಕೊಳ್ಳಲಿ. ಮುಂದಿನ 50 ವರ್ಷಗಳ ಅಭಿವೃದ್ಧಿ ಗಮನದಲ್ಲಿ ಇರಿಸಿಕೊಂಡು ವಿಮಾನ ನಿಲ್ದಾಣ ಮಾಡಿದ್ದೇವೆ. ಹೀಗಾಗಿ ಅಷ್ಟೊಂದು ಹಣ ವೆಚ್ಚವಾಗಿದೆ. ಎಲ್ಲ ತನಿಖೆ ಎದುರಿಸಲು ಸಿದ್ಧ ಎಂದರು.
ಶರಾವತಿ ಸಂತ್ರಸ್ತರ ಸಮಸ್ಯೆ, ವಿಐಎಸ್‌ಎಲ್ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲು ನಮ್ಮ ಸಂಘಟನೆ ಸಿದ್ಧವಿದೆ. ಹೆಚ್ಚು ಅವಧಿ ಅಧಿಕಾರ ನಡೆಸಿದ ಕಾಂಗ್ರೆಸ್ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಲು ವಿಫಲವಾಗಿದೆ ಎಂದು ಟೀಕಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಮಾಲತೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.
ಇಂದು ಸಂಸ್ಥಾಪನಾ ದಿನ:ಬಿಜೆಪಿ ಸ್ಥಾಪನೆಯಾಗಿದ್ದು 1980ರ ಏ.6ರಂದು. ಹಾಗಾಗಿ ಎಲ್ಲ ಬೂತ್ ಮಟ್ಟದಲ್ಲಿ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು. ಆರೋಗ್ಯ, ಶಿಕ್ಷಣ, ನೀರು, ಸ್ವಾಭಿಮಾನದ ಬದುಕು ಕೊಟ್ಟಿಕೊಡುವುದು ನಮ್ಮ ಮುಖ್ಯ ಧೈಯವಾಗಿದೆ. ಇದರ ಅಡಿಯಲ್ಲಿಯೇ ನಾವು ಕೆಲಸ ಮಾಡುತ್ತೇವೆ. ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net