

ಮಂಡ್ಯ: ಕಾಂಗ್ರೆಸ್ ಪಾಳಯ ಸೇರಲು ತುದಿಗಾಲಲ್ಲಿ ನಿಂತಿರುವ ಸಚಿವ ಕೆ.ಸಿ.ನಾರಾಯಣಗೌಡಗೆ ಬಿಜೆಪಿ ಚುನಾವಣೆಯ ಎರಡು ಸಮಿತಿಯಿಂದ ಗೇಟ್‌ಪಾಸ್ ನೀಡಲಾಗಿದೆ. ಇದರೊಂದಿಗೆ ಕಮಲ ತೊರೆಯಲು ನಿಂತಿರುವ ಪಕ್ಷಾಂತರಿಗೆ ವರಿಷ್ಠರು ಟಾಂಗ್ ಕೊಟ್ಟಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಚುನಾವಣಾ ಪ್ರಚಾರ ಹಾಗೂ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಇದರಲ್ಲಿ ಸಿಎಂ ಸೇರಿದಂತೆ ಸಚಿವರು, ವಿಧಾನಪರಿಷತ್ ಸದಸ್ಯರು, ಹಲವು ನಾಯಕರಿಗೆ ಸ್ಥಾನ ನೀಡಲಾಗಿದೆ. ಆದರೆ ಈ ಎರಡು ಸಮಿತಿಗಳಿಂದಲೂ ಕೆಸಿಎನ್ ಅವರನ್ನು ದೂರವಿಡಲಾಗಿದೆ. ಈ ಮೂಲಕ ಬಿಜೆಪಿಯಿಂದಲೂ ಪಕ್ಷಾಂತರ ಮಾಡುವುದನ್ನು ಖಚಿತಪಡಿಸಿದಂತಾಗಿದೆ.
ಮೂಲೆಗುಂಪಾದ ಸಚಿವರು: ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಕೂಡ ಅಲರ್ಟ್ ಆಗಿದೆ. ಮಾತ್ರವಲ್ಲದೆ ಕೆ.ಸಿ.ನಾರಾಯಣಗೌಡ ಅವರನ್ನು ಮೂಲೆಗುಂಪು ಮಾಡಲಾಗಿದೆ. ಇದಕ್ಕೆ ಪೂರಕವೆಂಬಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಗಮನ ಹಿನ್ನೆಲೆಯಲ್ಲಿ ಗುರುವಾರ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆದ ಸ್ಥಳ ಪರಿಶೀಲನೆ ವೇಳೆ ಕೆಸಿಎನ್ ಆಟಕ್ಕುಂಟು ಲೆಕ್ಕಕ್ಕಿಲ್ಲವೆನ್ನುವಂತಿದ್ದರು. ಜತೆಗೆ ಕೆಲವೊತ್ತು ಇದ್ದು ತಮ್ಮ ಪಾಡಿಗೆ ಕಾರಿನಲ್ಲಿ ಹೊರಟು ಹೋದರು. ಪ್ರಧಾನಿ ಕಾರ್ಯಕ್ರಮ ವಿಚಾರದಲ್ಲಿ ಕೆಸಿಎನ್‌ಗೆ ಯಾವುದೇ ಜವಾಬ್ದಾರಿ ವಹಿಸಿಲ್ಲವೆನ್ನುವುದನ್ನು ತೋರಿಸುವಂತಿತ್ತು.
ಅಭಿವೃದ್ಧಿ ಬಿಟ್ಟು ಭಾವುಕ ಮಾತು: ಇತ್ತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿರುವ ನಾರಾಯಣಗೌಡ, ಹೋಬಳಿವಾರು ಕಾರ್ಯಕರ್ತರ ಸಭೆ ಮಾಡುತ್ತಿದ್ದಾರೆ. ಈ ವೇಳೆಯೇ ಭಾವುಕತೆಯ ಮಾತು ಹಾಗೂ ಕಣ್ಣೀರು ಹಾಕುವ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.
ಸಚಿವ ಸ್ಥಾನ ಅಲಂಕರಿಸಿದ ಬಳಿಕ ಸಾವಿರಾರೂ ಕೋಟಿರೂಗಳನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿಯ ಪರ್ವವನ್ನೇ ಮಾಡಿದ್ದೇನೆಂದು ಭಾಷಣ ಮಾಡಿದ್ದ ಕೆಸಿಎನ್, ಇದೀಗ ಅಭಿವೃದ್ಧಿ ವಿಷಯ ಮುಂದಿಡದೇ ಭಾವುಕ ವಿಷಯವನ್ನೇ ಪ್ರಧಾನವಾಗಿರಿಸಿಕೊಂಡಿರುವುದು ವಿಶೇಷ. ಅಂತೆಯೇ ಹಿಂದೆ ಎದುರಾಳಿಗಳು ಮಾಡಿದ್ದ ಟೀಕೆಯ ಮಾತುಗಳನ್ನೇ ಬಳಸಿಕೊಂಡು ಜನರಿಗೆ ಹತ್ತಿರವಾಗುವ ಯತ್ನ ನಡೆಸುತ್ತಿದ್ದಾರೆ.
ಶುಕ್ರವಾರ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಕೆಸಿಎನ್, ನನಗೆ ತಾಲೂಕಿನ ಜನತೆಯೇ ತಂದೆ ತಾಯಿ. ನನ್ನ ತಾಯಿ ಜೀವ ಬಿಡುವ ಸಂದರ್ಭದಲ್ಲಿ ಹುಟ್ಟಿದ ಊರನ್ನು ಮರೆಯಬೇಡವೆಂದು ಭಾಷೆೆ ತೆಗೆದುಕೊಂಡಿದ್ದರಿಂದ ತಾಲೂಕಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದರಿಂದ ರಾಜಕಾರಣಿಗಳ ಕಣ್ಣು ಕೆಂಪಾಯಿತು. ಹೋಟೆಲ್‌ನಲ್ಲಿ ಲೋಟ ತೊಳೆಯುವ ಹೈದ ರಾಜಕಾರಣ ಮಾಡಲು ಸಾಧ್ಯವೇ ಎಂದು ಟೀಕಿಸಿದ್ದರು. ಇದರಿಂದಾಗಿ ಆಸಕ್ತಿಯಿಲ್ಲದಿದ್ದರೂ ರಾಜಕಾರಣಕ್ಕೆ ಬರಲೇಬೇಕಾಯಿತು ಎಂದಿದ್ದಾರೆ.
ಜೆಡಿಎಸ್ ಶಾಸಕನಾಗಿದ್ದಾಗ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ಸಚಿವನಾಗಿ 2000 ಕೋಟಿ ರೂ ಅನುದಾನವನ್ನು ತಂದು ತಾಲೂಕನ್ನು ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದೇನೆ. ಅಭಿವೃದ್ಧಿ ಕೆಲಸಗಳು ಪ್ರಗತಿ ಹಂತದಲ್ಲಿವೆ. ಇನ್ನ ಆರು ತಿಂಗಳಲ್ಲಿ ತಾಲೂಕು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮಾದರಿಯಾಗಲಿದೆ. ನಾನು ಚುನಾವಣೆಯಲ್ಲಿ ನಿಲ್ಲಬೇಕಾ, ಬೇಡವಾ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ಮುಲ್ ಮಾಜಿ ನಿರ್ದೇಶಕ ಎಸ್.ಅಂಬರೀಷ್, ಗೂಡೆಹೊಸಹಳ್ಳಿ ಜವರೇಗೌಡ, ಅಘಲಯ ಮಂಜುನಾಥ್, ಬೂಕನಕೆರೆ ಜವರಾಯಿಗೌಡ, ಬೀರುವಳ್ಳಿ ಕುಮಾರ್, ಅಂಜನಿಗೌಡ, ಸಚಿವ ಆಪ್ತ ಸಹಾಯಕ ದಯಾನಂದ್, ಅನಿಲ್ ಇದ್ದರು.