

ಮಂಗಳೂರು: ರಾಜಸ್ಥಾನ, ಛತ್ತೀಸ್‌ಘಡ, ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಮುಂದಿನ ಲೋಕಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ ಮಹತ್ವದ್ದಾಗಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ರಚನೆಯಾಗುವ ಸ್ಪಷ್ಟ ಸಂದೇಶ ಲಭಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದರು.
ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಬಂಟ್ಸ್‌ಹಾಸ್ಟೆಲ್‌ನ ಜಿಲ್ಲಾ ಬಿಜೆಪಿ ಕಚೇರಿಯಲಿ ಭಾನುವಾರ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಶಾಸಕ ವೇವ್ಯಾಸ ಕಾಮತ್ ಮಾತನಾಡಿ, ಕರ್ನಾಟಕದ ಜನತೆಗೆ ಗ್ಯಾರಂಟಿ ಹೆಸರಿನಲ್ಲಿ ಮೋಸ ಮಾಡಿದ ಕಾಂಗ್ರೆಸ್ ಅದನ್ನು ಸಮರ್ಪಕವಾಗಿ ಕೊಡಲಾಗದೆ ಹತ್ತು ಹಲವು ನಿಯಮಗಳನ್ನು ಹೇರಿ ಗ್ಯಾರಂಟಿಯಿಂದ ಜನರನ್ನು ವಂಚನೆ ಮಾಡಿದ್ದನ್ನು ಸರಿಯಾಗಿ ಅರ್ಥೈಸಿಕೊಂಡ ಮತದಾರರು ಕಾಂಗ್ರೆಸಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಕರ್ನಾಟಕದಿಂದ ಅಕ್ರಮವಾಗಿ ಕೋಟ್ಯಂತರ ರೂಪಾಯಿಗಳನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಂಡ ಕಾಂಗ್ರೆಸ್ ಬಿ ಆರ್ ಎಸ್ ಪಕ್ಷದ ಆಡಳಿತ ವಿರೋಧದ ಅಲೆಯಿಂದಾಗಿ ಗೆದ್ದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಮಾದರಿಯಲ್ಲಿ ತೆಲಂಗಾಣದಲ್ಲಿಯೂ ಕೂಡ ಗ್ಯಾರಂಟಿಗಳನ್ನು ಕೊಡಲಾಗದೆ ಇಲ್ಲ ಸಲ್ಲದ ನಿಯಮಗಳನ್ನು ಹೇರಿ ಜನರಿಗೆ ಮೋಸ ಮಾಡಲಿದೆ ಎಂದು ಹೇಳಿದರು
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ರಾಜ್ಯಾಧ್ಯಕ್ಷ ಸಯ್ಯದ್ ಸಲಾಂ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ವಿಜಯ ಕುಮಾರ್ ಶೆಟ್ಟಿ, ಬೃಜೇಶ್ ಚೌಟ, ಸತೀಶ್ ಕುಂಪಲ, ರೂಪಾ ಬಂಗೇರ, ಪೂಜಾ ಪೈ, ದಿವಾಕರ ಪಾಂಡೇಶ್ವರ, ಕಿಶೋರ್ ಕೊಟ್ಟಾರಿ, ವಸಂತ ಪೂಜಾರಿ, ಶಕೀಲಾ ಕಾವಾ, ಪೂರ್ಣಿಮಾ ಮೊದಲಾದವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.