ಬಿಜೆಪಿ ಚುನಾವಣಾ ಪ್ರಚಾರ

BJP election campaign
Published on

ಮಡಿಕೇರಿ:

ಮುಂದಿನ ಪೀಳಿಗೆಗೆ ಸುವರ್ಣ ಯುಗ ನಿರ್ಮಿಸಲು ದೇಶದಲ್ಲಿ ಬಿಜೆಪಿ ಆಡಳಿತ ಇರುವ ಅಗತ್ಯವಿದೆ ಎಂದು ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಶುಕ್ರವಾರದಿಂದ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ ಯದುವೀರ್ ಮಡಿಕೇರಿ ತಾಲೂಕು ಚೇರಂಬಾಣೆಯಲ್ಲಿ ನಡೆದ ತಮ್ಮ ಪ್ರಥಮ ಪ್ರಚಾರ ಸಭೆಯಲ್ಲಿ ಚೇರಂಬಾಣೆ, ಭಾಗಮಂಡಲ, ಕುಂದಚೇರಿ, ಬೆಟ್ಟಗೇರಿ, ಅಯ್ಯಂಗೇರಿ ಗ್ರಾಮ ವ್ಯಾಪ್ತಿಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ವಿಕಸಿತ ಭಾರತದ ಮೋದಿ ಆಶಯಕ್ಕೆ ಪೂರಕವಾಗಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನಮ್ಮ ತಾತ ಪ್ರಜಾಪ್ರಭುತ್ವದ ತತ್ವಗಳಿಗೆ ಅನುಗುಣವಾಗಿ ಮೈಸೂರು ಸಂಸ್ಥಾನ ವಿಸರ್ಜನೆ ಮಾಡಿ ಅಖಂಡ ಭಾರತದಲ್ಲಿ ಒಂದಾದರು. ಅಲ್ಲಿಗೆ ರಾಜ ಪ್ರಭುತ್ವದ ಆಳ್ವಿಕೆ ಕೊನೆಗೊಂಡು ಪ್ರಜಾಪ್ರಭುತ್ವ ಜಾರಿಗೆ ಬಂದಿದೆ. ಸಂವಿಧಾನದ ಅಡಿಯಲ್ಲಿ ರಾಜ-ಪ್ರಜೆ ಎನ್ನುವ ಬೇಧ ಇಲ್ಲ. ಇಲ್ಲಿ ಎಲ್ಲರೂ ಒಂದೇ. ಮೈಸೂರು ದಸರಾ, ಮೈಸೂರು ಅರಮನೆಯನ್ನು ಈಗ ಯಾರು ಬೇಕಾದರೂ ಸಂದರ್ಶಿಸಬಹುದು ಎಂದ ಅವರು, ಯದುವೀರ್ ಸಂಸದರಾದರೆ ಜನಸಾಮಾನ್ಯರಿಗೆ ಸಿಗುತ್ತಾರಾ ಎನ್ನುವ ಪ್ರಶ್ನೆ ಎಲ್ಲಾ ಕಡೆ ಇದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಸಂಸದರ ಪ್ರತ್ಯೇಕ ಕಚೇರಿಯೇ ಇರುತ್ತದೆ. ಇದು ನನ್ನ ಕಚೇರಿ ಅಲ್ಲ. ನಮ್ಮ ಕಾರ್ಯಕರ್ತರ ಕಚೇರಿ ಆಗಿರುತ್ತದೆ ಎಂದು ಹೇಳಿದರು.

ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಭಾರತ ವಿಶ್ವಗುರು ಸ್ಥಾನದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಜನ ಮೆಚ್ಚಿದ್ದಾರೆ. ಹಿಂದಿನ ಸಂಸದ ಪ್ರತಾಪ್ ಸಿಂಹ ಜನಪರ ಕಾರ್ಯಕ್ರಮ ಜಾರಿಗೊಳಿಸಿ ಕ್ಷೇತ್ರದ ಅಭ್ಯುಧಯಕ್ಕೆ ಶ್ರಮಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಉದಾಸೀನ ತೋರದೆ ಕೇಂದ್ರ ಹಾಗೂ ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು. ಯಾವುದಕ್ಕೂ ಅತಿಯಾದ ಆತ್ಮವಿಶ್ವಾಸ ಬೇಡ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಈ ಚುನಾವಣೆ ದೇಶದ ಭದ್ರತೆ, ಆರ್ಥಿಕತೆ ರಕ್ಷಣೆಯ ಪರ ಯುದ್ಧವಾಗಿರುತ್ತದೆ. ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ವಿಶ್ವಕ್ಕೆ ಮಾದರಿಯಾಗಿದೆ. ಆರ್ಥಿಕತೆಯಲ್ಲಿ ಭಾರತ ೫ನೇ ಸ್ಥಾನಕ್ಕೆ ಏರಿದೆ. ಮುಂದೆ ೩ನೇ ಸ್ಥಾನಕ್ಕೆ ಏರುವ ಗುರಿ ಹೊಂದಲಾಗಿದೆ. ಹಿಂದಿನ ಚುನಾವಣೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಡೇರಿಸಿದೆ. ಭಾರತ ವಿಶ್ವ ಗುರು ಆಗಬೇಕು. ಈಗಿನ ಅಭಿವೃದ್ಧಿ ಮುಂದವರಿಯಬೇಕಿದೆ. ಈ ನಿಟ್ಟಿನಲ್ಲಿ ಈಗ ಆಗಿರುವ ಅಭಿವೃದ್ಧಿ ಕಾರ್ಯ ಎಲ್ಲರಿಗೂ ತಲುಪಿಸಬೇಕು. ಕೊಡಗಿನಿಂದ ೧ ಲಕ್ಷಕ್ಕೂ ಹೆಚ್ಚು ಅಂತರದ ಗೆಲುವು ಕೊಡಬೇಕು. ಜಿಲ್ಲೆಯಲ್ಲಿ ಕೇಂದ್ರದ ಒಂದಲ್ಲಾ ಒಂದು ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಅವರಿಗೆ ಕಾರ್ಯಕರ್ತರು ಇದರ ಮನವರಿಕೆ ಮಾಡಬೇಕು. ತಮ್ಮ ವ್ಯಯಕ್ತಿಕ ಚುನಾವಣೆ ಎನ್ನುವಂತೆ ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್ತು ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲೀರ ಚಲನ್ ಕುಮಾರ್, ವಕ್ತಾರರಾದ ತಳೂರು ಕಿಶೋರ್ ಕುಮಾರ್, ಬಿ.ಕೆ. ಅರುಣ್ ಕುಮಾರ್, ಸುಬ್ರಮಣ್ಯ ಉಪಾಧ್ಯಯ, ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಅಫ್ರು ರವೀಂದ್ರ, ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಮುಖರಾದ ಕಾಂಗೀರ ಸತೀಶ್, ಕಾರೇರ ಕವನ್ ಕಾವೇರಪ್ಪ, ಪಿ.ಡಿ. ಪೊನ್ನಪ್ಪ, ಡೀನ್ ಬೋಪಣ್ಣ, ಬಿ.ಎಂ. ಹರೀಶ್, ರೀನಾ ಪ್ರಕಾಶ್ ಇತರರು ಇದ್ದರು.
ಚೇರಂಬಾಣೆಯ ಸಭೆ ನಂತರ ಸಂಪಾಜೆಯಲ್ಲಿ ಸಂಪಾಜೆ, ಚೆಂಬು, ಪೆರಾಜೆ, ಮದೆನಾಡು ಗ್ರಾಮವ್ಯಾಪ್ತಿಯ ಸಭೆ ಮತ್ತು ಮೂರ್ನಾಡುವಿನಲ್ಲಿ ಮೂರ್ನಾಡು, ಮರಗೋಡು, ಹೊಸ್ಕೆರಿ, ಹಾಕತ್ತೂರು, ಹೊದ್ದೂರು, ಪಾರಾಣೆ, ಚೆಯ್ಯಂಡಾಣೆ, ಮೇಕೇರಿ ಗ್ರಾಮವ್ಯಾಪ್ತಿಯ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net