

ಹುಬ್ಬಳ್ಳಿ: ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಣೆ ಮಾಡಿದ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಇವರು ಏನು ಮಾಡಲಿಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ತಲೆಯಲ್ಲಿ ಕೇವಲ ರಾಜಕೀಯ ಇದೆಯೇ ಹೊರತು ಯಾವುದೇ ಸಾಂಸ್ಕೃತಿಕ, ಸಾಮಾಜಿಕ ವಿಚಾರಗಳಿಲ್ಲ ಎಂದರು.
ಹಾನಗಲ್ನಲ್ಲಿ ಘಟಿಸಿದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಬಿಜೆಪಿಯವರು ಪ್ರತಿಭಟನೆ ಮಾಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಐಎನ್ಡಿಐಎ ಒಕ್ಕೂಟದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿರುವ ವಿಚಾರವು ಕರ್ನಾಟಕದ ಜನರು ಅಭಿಮಾನ ಪಡುವಂತದ್ದಾಗಿದೆ. ಅವರು ಮೈತ್ರಿಕೂಟದ ಎಲ್ಲ ಪಕ್ಷಗಳ, ಮುಖಂಡರ ವಿಶ್ವಾಸಗಳಿಸುತ್ತಿದ್ದಾರೆ. ಇದು ಒಕ್ಕೂಟದ ಒಳ್ಳೆಯ ನಿರ್ಣಯವಾಗಿದ್ದು, ಖರ್ಗೆ ಅವರು ಯಶಸ್ವಿಯಾಗಲಿದ್ದಾರೆ. ದೇಶಕ್ಕೆ ಹೊಸ ಪ್ರಧಾನಿ ನೀಡಲಿದ್ದಾರೆ ಎಂದು ಹೇಳಿದರು.