ಶಾಸಕ ಪೊನ್ನಣ್ಣ ಸಲಹೆ ಬಿಜೆಪಿಗೆ ಅಗತ್ಯವಿಲ್ಲ

28 gkp 1
ರಾಬಿನ್ ದೇವಯ್ಯ
Published on

ಗೋಣಿಕೊಪ್ಪ: ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಸಲಹೆ ಬಿಜೆಪಿ ಪಕ್ಷಕ್ಕೆ ಅಗತ್ಯವಿಲ್ಲ. ಪಕ್ಷ ಇಲ್ಲಿಯ ತನಕ ಹೋರಾಟದಿಂದಲೇ ಮುಂದೆ ಬಂದಿದೆ. ಎಲ್ಲವನ್ನು ಕಾನೂನಾತ್ಮಕವಾಗಿ ಎದುರಿಸುವ ಶಕ್ತಿ ಬಿಜೆಪಿಗಿದೆ. ಬಿಜೆಪಿ ನಡೆಸಿದ ಪ್ರತಿಭಟನೆಗೆ ಜಾತಿಯ ಬಣ್ಣ ಕಟ್ಟುವ ಮೂಲಕ ರಾಜಕೀಯ ಮಾಡುತ್ತಿರುವುದು ಎಷ್ಟು ಸರಿ? ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸುಮೋಟೋ ಕೇಸ್‌ಗಳು ಈ ಹಿಂದೆ ಯಾಕೆ ಇರಲಿಲ್ಲ..? ಭೂ ಕಬಳಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ, ಕಾಂಗ್ರೆಸ್ ಸರ್ಕಾರದಿಂದ ತಂದಿರುವ ಅನುದಾನದ ಬಗ್ಗೆ ಶ್ವೇತ ಪತ್ರವನ್ನು ಜನರ ಮುಂದಿಡಿ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ನಡೆಯುತ್ತಿದೆ. ಈ ವೇಳೆ ಇದನ್ನು ಖಂಡಿಸಲು ಬಿಜೆಪಿ ಪಕ್ಷದ ವತಿಯಿಂದ ವಿರಾಜಪೇಟೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಆ ಸಂದರ್ಭದಲ್ಲಿ ಶಾಸಕ ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಪ್ರಮುಖರ ಪ್ರತಿಕ್ರತಿ ದಹನ, ಕಲ್ಪಿತ ಶವಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಹೋರಾಟ ಮಾಡಲಾಗಿದೆ. ಇದಕ್ಕೆ ಜಾತಿಯ ಬಣ್ಣ ಕಟ್ಟುವುದು ಎಷ್ಟು ಸರಿ? ಎಂದು ಪ್ರಶ್ನಸಿದರು.

ಕಾಂಗ್ರೆಸ್ ಕೂಡ ಬಿಜೆಪಿ ನಾಯಕರ ಪ್ರತಿಕೃತಿ ದಹನ ಮಾಡಿದೆ. ಆ ಸಂದರ್ಭದಲ್ಲಿ ಇಂದಿನ ಕಾನೂನು ಯಾಕೆ ಇರಲಿಲ್ಲ? ಬಿಜೆಪಿಗೆ ಮಾತ್ರ ಯಾಕೆ? ಬಿಜೆಪಿಗೆ ಇದನ್ನು ಕಾನೂನಾತ್ಮಕವಾಗಿ ಎದುರಿಸುವ ಶಕ್ತಿ ಇದೆ ಎಂದರು.

ಪಕ್ಷದ ಪ್ರಮುಖರು ಭೂ ಕಬಳಿಕೆ ಮಾಡಿದ್ದಾರೆ, ದನ ಸಾಗಾಟ ಮಾಡಿದ್ದಾರೆ ಎಂದು ಶಾಸಕ ಪೊನ್ನಣ್ಣ ಹೇಳುತ್ತಿದ್ದಾರೆ. ಇಂತವರ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಬರುವ ಚೆತ್ತು ಕಲ್ಲು ಇಟ್ಟಿಗೆ ಬೆಲೆ ದುಪ್ಪಟ್ಟಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಇಟ್ಟಿಗೆಗಳು ಬರುತ್ತಿದ್ದವು. ಇದೀಗ ಬೆಲೆ ಜಾಸ್ತಿ ಆಗಲು ಕಾರಣವೇನು? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರಕ್ಕೆ ಬಂದಿರುವ ಅನುದಾನದ ಬಗ್ಗೆ ಶ್ವೇತ ಪತ್ರ ಹೊರಡಿಸಿ, ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳ ಅನುದಾನವನ್ನು ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಶಾಸಕರು ತಂದ ಅನುದಾನವಾಗಿದೆ. ಶಾಸಕ ಪೊನ್ನಣ್ಣ ತಂದಿರುವ ಅನುದಾನದ ಬಗ್ಗೆ ವರದಿಯನ್ನು ಜನರ ಮುಂದಿಡಿ ಎಂದು ಸವಾಲು ಹಾಕಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿನ ಚಲನ್, ವಾಟೇರಿರ ಬೋಪಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net